ರತನ್ ಟಾಟಾ ವಿಲ್‌ನಲ್ಲಿ ಸಾಕು ನಾಯಿ ಟಿಟೋಗೆ ಆಸ್ತಿ ಹಂಚಿಕೆ..! ಶಾಂತನು, ಬಾಣಸಿಗರಿಗೂ ಸೇರಲಿದೆ ಟಾಟಾ ಆಸ್ತಿ..!!

Share with

ದೇಶದ ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಅ. 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಇದೀಗ ರತನ್‌ ಟಾಟಾರವರು ಬರೆದಿಟ್ಟಿದ್ದ ವಿಲ್‌ ವಿಚಾರ ಬೆಳಕಿಗೆ ಬಂದಿದೆ. ಅದರಲ್ಲಿ ತಮ್ಮ ಆಸ್ತಿಯನ್ನು ಕುಟುಂಬ ಮತ್ತು ಕೆಲವು ಆಪ್ತರಿಗೆ ಹಂಚುವ ಬಗ್ಗೆ ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರ ಮುದ್ದಿನ ನಾಯಿ ಟಿಟೊ ಬಗ್ಗೆಯೂ ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಅಲಿಬಾಗ್‌ನಲ್ಲಿ 2,000 ಚದರ ಅಡಿ ಬೀಚ್ ಬಂಗಲೆ, ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆ, ₹350 ಕೋಟಿಗೂ ಹೆಚ್ಚು ಸ್ಥಿರ ಠೇವಣಿ ಮತ್ತು ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಒಳಗೊಂಡಿರುವ ಅವರ ಸಂಪತ್ತು ₹10,000 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ವಿಲ್ ನಲ್ಲಿ ರತನ್ ಟಾಟಾ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿ ಟಿಟೊನತ್ತ ‘ಅನಿಯಮಿತ ಆರೈಕೆ’ಯನ್ನು ತೋರಿದ್ದಾರೆ. ಟಿಟೊವನ್ನು ಅವರ ದೀರ್ಘಕಾಲದ ಬಾಣಸಿಗ ರಾಜನ್ ಶಾ ನೋಡಿಕೊಳ್ಳುತ್ತಾರೆ. ತಾವು ಸಾಕಿದ ಶ್ವಾನಗಳ ಹೆಸರಿನಲ್ಲಿ ಸಂಪತ್ತಿಡುವುದು ಪಾಶ್ಚಿಮಾತ್ಯ ಸಂಸ್ಕೃತಿ, ಭಾರತದಲ್ಲಿ ಈ ಪದ್ಧತಿ ಕಂಡು ಬರುವುದು ಅತೀ ವಿರಳ. ಆದರೆ ಪ್ರಾಣಿ ಪ್ರೇಮಿಯಾಗಿದ್ದ ಟಾಟಾರವರು ಟಿಟೊ ಹೆಸರಲ್ಲೂ ತಮ್ಮ ಸಂಪತ್ತನ್ನು ಹಂಚಿರುವುದು ಅವರಿಗೆ ಪ್ರಾಣಿಗಳ ಮೇಲಿದ್ದ ಪ್ರೀತಿಯನ್ನು ಬಹಿರಂಗಗೊಳಿಸುತ್ತದೆ. ಇದಲ್ಲದೇ, ಕಳೆದ 30 ವರ್ಷಗಳಿಂದ ಟಾಟಾ ಅವರ ಬಳಿ ಇದ್ದ ಬಟ್ಲರ್ ಸುಬ್ಬಯ್ಯ ಅವರ ಬಗ್ಗೆಯೂ ವಿಲ್‌ ನಲ್ಲಿ ಉಲ್ಲೇಖಿಸಲಾಗಿದೆ. ರಾಜನ್ ಮತ್ತು ಸುಬ್ಬಯ್ಯ ಇಬ್ಬರೂ ರತನ್ ಟಾಟಾ ಅವರಿಗೆ ತುಂಬಾ ಹತ್ತಿರವಾಗಿದ್ದರು.

ಟಾಟಾರ ಮುದ್ದಿನ ಶ್ವಾನ ಟಿಟೋ, ಶ್ವಾನಗಳ ಮೇಲಿನ ಪ್ರೀತಿ ಅಪಾರ

ಟಾಟಾರವರ ಈ ಮೊದಲಿನ ನಾಯಿ ಸಾವನ್ನಪ್ಪಿದ ಬಳಿಕ ಅವರು ಜರ್ಮನ್ ಶೆಫರ್ಡ್​ ನಾಯಿ ಟಿಟೊವನ್ನು ಆರು ವರ್ಷಗಳ ಹಿಂದೆ ದತ್ತು ಪಡೆದಿದ್ದರು ಎಂಬುವುದು ಉಲ್ಲೇಖನೀಯ. ತನ್ನ ಎರಡು ನಾಯಿಗಳಾದ ಟಿಟೊ ಮತ್ತು ಟ್ಯಾಂಗೋ ಜೊತೆ ವಾಸಿಸುತ್ತಿದ್ದ ಟಾಟಾ ತನ್ನ ಸಾಕುಪ್ರಾಣಿಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದರು. “ಸಾಕುಪ್ರಾಣಿಗಳಂತೆ ನಾಯಿಗಳ ಮೇಲಿನ ನನ್ನ ಪ್ರೀತಿ ಯಾವಾಗಲೂ ದೊಡ್ಡದು. ನಾನು ಬದುಕಿರುವವರೆಗೂ ಇದು ಮುಂದುವರಿಯುತ್ತದೆ” ಎಂದು ಅವರು ಇತ್ತೀಚೆಗೆ ಟಾಟಾ ರಿವ್ಯೂಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇನ್ನು ಟಾಟಾರಿಗೆ ನಾಯಿಗಳ ಮೇಲಿದ್ದ ಪ್ರೀತಿ ಅಪಾರ. ಅವುಗಳ ರಕ್ಷಣೆ ಹಾಗೂ ಪೋಷಣೆ ವಿಚಾರದಲ್ಲಿ ಅವರು ಬಹಳಷ್ಟು ಗಮನ ಹರಿಸಿದ್ದರು. ಅಲ್ಲದೇ ಬೀದಿ ನಾಯಿಗಳ ರಕ್ಷಣೆಗಾಗಿ ಶ್ರಮಿಸಿದ್ದರು.

ನಾಯಿ ಅಸ್ವಸ್ಥ, ಜೀವಮಾನ ಸಾಧನೆ ಪ್ರಶಸ್ತಿ ಕಾರ್ಯಕ್ರಮಕ್ಕೆ ಗೈರು

2018 ರಲ್ಲಿ, ರತನ್ ಟಾಟಾ ಅವರ ಸಮಾಜಮುಖಿ ಕೆಲಸಕ್ಕಾಗಿ ಬ್ರಿಟನ್ ಅರಮನೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಮುಂದಾಗಿತ್ತು. ರತನ್ ಟಾಟಾ ಅವರು ಬ್ರಿಟಿಷ್ ಏಷ್ಯನ್ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮಕ್ಕಾಗಿ ಬಕಿಂಗ್ಹ್ಯಾಮ್ ಅರಮನೆಗೆ ತೆರಳಬೇಕಾಗಿತ್ತು ಆದರೆ ರತನ್ ಟಾಟಾ ಅವರು ಕೊನೆಯ ಗಳಿಗೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ತೆರಳಲಿಲ್ಲ. ತಮ್ಮ ಪ್ರೀತಿಯ ನಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಕೊನೆಯ ಕ್ಷಣದಲ್ಲಿ ಅವರು ತನ್ನ ಪ್ರವಾಸವನ್ನು ರದ್ದುಗೊಳಿಸಿದ್ದರು. ಪ್ರಶಸ್ತಿಗಿಂತ ಅವರಿಗೆ ಸಾಕು ನಾಯಿಯ ಆರೋಗ್ಯವೇ ಮುಖ್ಯವಾಗಿತ್ತು.

ಶಾಂತನು ನಾಯ್ಡು ಬಗ್ಗೆಯೂ ಪ್ರೀತಿ

ಟಾಟಾ ಅವರ ನಿಕಟ ಮಾರ್ಗದರ್ಶಕ ಶಂತನು ನಾಯ್ಡು ಅವರೊಂದಿಗೆ ಆಗಾಗ್ಗೆ ಕಂಡುಬರುತ್ತಿದ್ದ ಅವರ ಉಲ್ಲೇಖವೂ ವಿಲ್‌ನಲ್ಲಿ ಕಂಡುಬರುತ್ತದೆ. ರತನ್ ಟಾಟಾ ಅವರು ನಾಯ್ಡು ಅವರ ಒಡನಾಟದ ಉದ್ಯಮ ‘ಗುಡ್ ಫೆಲೋಸ್’ ನಲ್ಲಿ ತಮ್ಮ ಪಾಲನ್ನು ಬಿಟ್ಟುಕೊಟ್ಟಿದ್ದಾರೆ ಮತ್ತು ಅವರ ಶಿಕ್ಷಣ ಸಾಲವನ್ನು ಮನ್ನಾ ಮಾಡಿದರು. ಟಾಟಾ ಗ್ರೂಪ್ ಸಂಪ್ರದಾಯದಂತೆ, ಟಾಟಾ ಸನ್ಸ್‌ನಲ್ಲಿನ ಅವರ ಪಾಲನ್ನು ‘ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್’ (ಆರ್‌ಟಿಇಎಫ್) ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ರತನ್ ಟಾಟಾ ಅವರ ಮರಣದ ನಂತರ, ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ, ಅವರು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದ್ದಾರೆ. ರತನ್ ಟಾಟಾ ಅವರ ನಿಧನದ ನಂತರ, ಗ್ರೂಪ್ ಕಂಪನಿಯ ಮಂಡಳಿಯಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ, ಅವರು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರೂ ಆಗಿರುತ್ತಾರೆ.


Share with

Leave a Reply

Your email address will not be published. Required fields are marked *