ಮೂಡುಬಿದಿರೆ: ರಾಷ್ಟ್ರದ ಪರಂಪರೆಯ ಶ್ರೀಮಂತಿಕೆಯ ಅನನ್ಯತೆಯೊಂದಿಗೆ ಸಾಂಸ್ಕೃತಿಕ ಮನಸ್ಸುಗಳನ್ನು ತನ್ನತ್ತ ಸೆಳೆಯುವ ಮೂಡುಬಿದಿರೆಯ ವಿದ್ಯಾಗಿರಿ ಮತ್ತೆ ಆಳ್ವಾಸ್ ವಿರಾಸತ್ 2023ರ ತಳಿರು ತೋರಣಗಳೊಂದಿಗೆ ಸಜ್ಜುಗೊಂಡಿದ್ದು, ಈ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಚಾಲನೆಯನ್ನು ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
29ನೇ ಆಳ್ವಾಸ್ ವಿರಾಸತ್ ಡಿಸೆಂಬರ್ 17ರವರೆಗೆ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಪ್ರತೀ ದಿನ ಸಂಜೆ ವೇಳೆಗೆ ಸಾಂಸ್ಕೃತಿಕ ರಸದೌತಣ ನೀಡಲು ವಿರಾಸತ್ ವೇದಿಕೆ ಸಜ್ಜಾಗಿದೆ. ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದಲ್ಲಿ ಸಾವಿರಕ್ಕೂ ಅಧಿಕ ಕಲಾಕೃತಿಗಳು ರಂಜಿಸುತ್ತಿವೆ.
ವೇದಿಕೆಯಲ್ಲಿ ವಿರಾಸತ್ ರೂವಾರಿ ಮೋಹನ್ ಆಳ್ವಾ, ಪ್ರದೀಪ್ ಕುಮಾರ್ ಕಲ್ಕೂರ, ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಡಿಸಿ ಮುಲ್ಲೈ ಮುಹಿಲನ್ ಮೊದಲಾದವರಿದ್ದರು.