ಮಂಗಳೂರು: ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್)ಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಪ್ಯಾರೇಜಾನ್ ಸೇಟು (37), ವಿಟ್ಲ ನಿವಾಸಿ ಬದ್ರುದ್ದೀನ್ ಬದ್ರು (28), ತಮಿಳುನಾಡಿನ ರಾಜೇಶ್ ಆರ್ (22) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ದಸ್ತಗಿರಿ ಮಾಡಿದ ಮೂವರು ಆರೋಪಿಗಳಿಂದ 1,57,50,000/- ರೂಪಾಯಿ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಗಳಿಂದ ಒಟ್ಟು 1,62,80,000 ರೂಪಾಯಿ ಮೌಲ್ಯದ ಸೊತ್ತು ವಶಪಡಿಸಲಾಗಿದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.