ಔರೈಯಾ (ಉತ್ತರ ಪ್ರದೇಶ): ಮನುಷ್ಯ ಮರಣ ಹೊಂದಿದ ಬಳಿಕ ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಕುಟುಂಬದವರು ಹನ್ನೆರಡನೇ ದಿನ ಅಥವಾ ಹದಿಮೂರನೇ ದಿನದ ಶಾಸ್ರೋಕ್ತ ಕಾರ್ಯಗಳನ್ನು ಮಾಡುವುದು ವಾಡಿಕೆ. ಆದರೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಲಕ್ಷ್ಮಣಪುರ ಗ್ರಾಮದಲ್ಲಿ 65 ವರ್ಷದ ವೃದ್ಧರೊಬ್ಬರು ತಾನು ಬದುಕಿರುವಾಗಲೇ ತಮ್ಮ ‘ತಿಥಿ’ ಭೋಜನವನ್ನು ತಾವೇ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಮವಾರ ನಡೆದ ಈ ವಿಶೇಷ ಸಮಾರಂಭಕ್ಕೆ ಅವರು ಸುಮಾರು 1,900 ಜನರನ್ನು ಆಮಂತ್ರಿಸಿ ಭರ್ಜರಿ ಊಟ ಹಾಕಿಸಿದ್ದಾರೆ.

ರಾಕೇಶ್ ಯಾದವ್ ಎಂಬ ಹೆಸರಿನ ಈ ವೃದ್ಧರ ಇಂತಹ ವಿಚಿತ್ರ ನಿರ್ಧಾರದ ಹಿಂದೆ ಸುದೀರ್ಘ ವರ್ಷಗಳ ಒಂಟಿತನ ಮತ್ತು ಭವಿಷ್ಯದ ಬಗೆಗಿನ ಆತಂಕ ಅಡಗಿದೆ. ಮೂವರು ಸಹೋದರರಲ್ಲಿ ಹಿರಿಯವರಾದ ರಾಕೇಶ್ ಅವರು ಅವಿವಾಹಿತರು. ಅವರ ಇಬ್ಬರು ತಮ್ಮಂದಿರ ಪೈಕಿ ಒಬ್ಬರು ಅನಾರೋಗ್ಯದಿಂದ ಮೃತಪಟ್ಟರೆ, ಮತ್ತೊಬ್ಬರು ಕೊಲೆಗೀಡಾಗಿದ್ದರು. ಅವರ ಇಬ್ಬರು ಸಹೋದರರೂ ಮದುವೆಯಾಗಿರಲಿಲ್ಲ. ಒಬ್ಬಳು ತಂಗಿ ಇದ್ದರೂ ಆಕೆ ತನ್ನ ಸಂಸಾರದೊಂದಿಗೆ ಬೇರೆಡೆ ವಾಸವಾಗಿದ್ದಾಳೆ. ಹೀಗಾಗಿ ರಾಕೇಶ್ ಅವರು ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಒಂಟಿಯಾಗಿದ್ದರು.
ತಾನು ಸತ್ತ ಮೇಲೆ ಅಂತ್ಯಸಂಸ್ಕಾರ ಮಾಡಲು ಅಥವಾ ತಿಥಿ ಕಾರ್ಯಗಳನ್ನು ನೆರವೇರಿಸಲು ಯಾರೂ ಇಲ್ಲ ಎಂಬ ಭಯ ಅವರನ್ನು ಕಾಡುತ್ತಿತ್ತು. “ನಾನು ಹೋದ ಮೇಲೆ ನನಗಾಗಿ ಶಾಸ್ತ್ರ ಮಾಡುವವರು ಯಾರು? ಗ್ರಾಮದಲ್ಲಿ ಬೇರೆಯವರು ತೀರಿಕೊಂಡಾಗ ನಾನು ಹೋಗಿ ಊಟ ಮಾಡಿ ಬರುತ್ತಿದ್ದೆ. ನನ್ನ ಸರದಿ ಬಂದಾಗ ಅದನ್ನು ಮಾಡುವವರೇ ಇಲ್ಲದಿದ್ದರೆ ಹೇಗೆ? ಎಂಬ ಆಲೋಚನೆ ನನ್ನನ್ನು ಕಾಡುತ್ತಿತ್ತು. ಅದಕ್ಕಾಗಿಯೇ ನನ್ನ ಜೀವಿತಾವಧಿಯಲ್ಲೇ ಈ ಕಾರ್ಯ ಮುಗಿಸಲು ನಿರ್ಧರಿಸಿದೆ” ಎಂದು ರಾಕೇಶ್ ಅವರು ಗದ್ಗದಿತರಾಗಿ ಹೇಳಿದ್ದಾರೆ.
ಇದಕ್ಕಾಗಿ ಅವರು ತಮ್ಮ ಅಲ್ಪಸ್ವಲ್ಪ ಉಳಿತಾಯದ ಹಣ ಮತ್ತು ವೃದ್ಧಾಪ್ಯ ವೇತನದ ಹಣವನ್ನು ಬಳಸಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಅಕ್ಕಪಕ್ಕದ ಗ್ರಾಮದವರಿಗೂ ಹಂಚಿ ಈ ಭೋಜನವನ್ನು ಏರ್ಪಡಿಸಿದ್ದರು. ಸದ್ಯ ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿರುವ ಇವರು, ತಮ್ಮ ಪಿತ್ರಾರ್ಜಿತ ಮನೆಯನ್ನು ಈಗಾಗಲೇ ಸಂಬಂಧಿಕರೊಬ್ಬರಿಗೆ ದಾನ ಮಾಡಿದ್ದಾರೆ. “ನನ್ನ ತಂಗಿಗೆ ತನ್ನದೇ ಆದ ಕುಟುಂಬವಿದೆ, ಅವರಿಗೆ ಹೊರೆಯಾಗಲು ನನಗಿಷ್ಟವಿಲ್ಲ. ಉಳಿದ ಸಂಬಂಧಿಕರ ಮೇಲೆ ನನಗೆ ಭರವಸೆಯಿಲ್ಲ” ಎನ್ನುವ ಇವರು, ಈ ಭೋಜನದ ಮೂಲಕ ತಮ್ಮ ಅಸ್ತಿತ್ವವನ್ನು ಸಮಾಜ ಗುರುತಿಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.




