ಅಡಿಕೆ ರೋಗಬಾಧೆ ಬೆನ್ನಲ್ಲೇ ಕೃಷಿಕರಿಗೆ ಮತ್ತೊಂದು ಸಂಕಷ್ಟ .!!

Share with

ದ.ಕ: ಅಡಿಕೆ ತೋಟಗಳಲ್ಲಿ ಕೊಳೆರೋಗ, ಎಲೆಚುಕ್ಕಿ ಬಾಧೆ ನಡುವೆ ಈಗ ಮೈಲುತುತ್ತು (ಕಾಪರ್‌ಸ್ರಟ್) ದರ ದಿಢೀರ್ ಏರಿಕೆಯಾಗಿದ್ದು, ಬೆಳೆಗಾರರ ಮೇಲೆ ಹೆಚ್ಚುವರಿ ಖರ್ಚಿನ ಹೊರೆ ಬಿದ್ದಿದೆ.

ಮೈಲುತುತ್ತು ಧಾರಣೆ ಕೆಲವು ವಾರಗಳಲ್ಲೇ ಕೆಜಿಗೆ 250 ರಿಂದ 300 ರವರೆಗೆ ಏರಿಕೆಯಾಗಿ, 500 ರಿಂದ 570 ರೂ. ದರಕ್ಕೆ ತಲುಪಿದೆ. ಹೀಗಾಗಿ ಮದ್ದು ಸಿಂಪಡಣೆಯೇ ಈಗ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಔಷಧ ಸಿಂಪಡಣೆ: ಅಡಕೆ ತೋಟಗಳಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ಮಿಶ್ರಣ ಅತ್ಯಾವಶ್ಯಕವಾಗಿದ್ದು, ಅದರಲ್ಲಿ ಪ್ರಮುಖ ಅಂಶವಾದ ಮೈಲುತುತ್ತು ಇಲ್ಲದೆ ಔಷಧ ಸಿಂಪಡಣೆ ಸಾಧ್ಯವಿಲ್ಲ. ಹಿಂಗಾರ ಉದುರುವಿಕೆ, ಎಲೆ ಚುಕ್ಕಿ-ಹೀಗೆ ರೋಗಬಾಧೆ ಹೆಚ್ಚಾಗಿದ್ದು, ನಿಯಂತ್ರಣಕ್ಕಾಗಿ ಕನಿಷ್ಠ ನಾಲ್ಕು ಬಾರಿ ಔಷಧ ಸಿಂಪಡಿಸಬೇಕು. ಹೆಚ್ಚು ಮಳೆಯ ಪ್ರದೇಶಗಳಲ್ಲಿ 5-6 ಬಾರಿ ಸಿಂಪಡಿಸುವ ಸ್ಥಿತಿ ಇದೆ.

ದರ ಹೆಚ್ಚಳ: ಹಿಂದೆ ಕೆಜಿಗೆ ರೂ. 250-ರೂ. 300 ದರದಲ್ಲಿ ಲಭ್ಯವಾಗುತ್ತಿದ್ದ ಮೈಲುತುತ್ತು ಈಗ 550 ದಾಟಿದೆ. ಮಳೆಗಾಲಕ್ಕೆ ಇನ್ನೂ ಕೆಲವು ತಿಂಗಳು ಬಾಕಿ ಇರುವಾಗಲೇ ಇಷ್ಟೊಂದು ಪ್ರಮಾಣದಲ್ಲಿ ದರ ಏರಿಕೆ ಆಗಿರುವುದು ಮುಂದಿನ ದಿನಗಳಲ್ಲಿ ಇನ್ನೇನೋ ಎಂಬ ಆತಂಕ ಹುಟ್ಟಿಸಿದೆ.

ಸರಕಾರದಿಂದ ಹಿಂದೆ ದೊರೆಯುತ್ತಿದ್ದ ಸಹಾಯಧನ ಇತ್ತೀಚಿನ ವರ್ಷ ಗಳಲ್ಲಿ ಸಿಗದಿರುವುದೂ ಸಮಸ್ಯೆಯನ್ನು ಗಂಭೀರಗೊಳಿಸಿದೆ. ದರ ಏರಿಕೆಗೆ ಸ್ಪಷ್ಟ ಕಾರಣ ತಿಳಿಯದಿರುವುದರ ನಡುವೆ, ರೈತರ ಪರವಾಗಿ ಧ್ವನಿ ಎತ್ತಬೇಕಾದ ಸಹಕಾರ ಸಂಸ್ಥೆಗಳು ಮತ್ತು ಪ್ರತಿನಿಧಿಗಳು ಮೌನ ವಹಿಸಿರುವುದರ ಬಗ್ಗೆ ಟೀಕೆ ವ್ಯಕ್ತವಾಗಿದೆ. ಕೇಂದ್ರ -ರಾಜ್ಯ ಸರಕಾರಗಳು ಮಧ್ಯ ಪ್ರವೇಶಿಸಿ ಮೈಲುತುತ್ತು ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.


Share with

Leave a Reply

Your email address will not be published. Required fields are marked *