ಉಡುಪಿ: ಹಲವು ಕಡೆಗಳಲ್ಲಿ ನಡೆದ ಅಡಿಕೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಶಂಕರನಾರಾಯಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಂದಾಪುರ ಗುಲ್ವಾಡಿ ಗ್ರಾಮದ ಅಮೀರ್ ಝೈನುದ್ದೀನ್ (23), ಭಟ್ಕಳ ಬಿಳಲಖಂಡ ಗ್ರಾಮದ ಮುನಾವರ್(21), ಭಟ್ಕಳ ಉಸ್ಮಾನ್ ನಗರದ ನಿಸಾರ್ ಆಸೀಫ್ ಅನ್ನಾರ್(24) ಎಂದು ಗುರುತಿಸಲಾಗಿದೆ.
ಬಂಧಿತರು ಶಂಕರನಾರಾಯಣ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿ ಎಂಬಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.
ಬಂಧಿತರಿಂದ 11.25 ಕ್ವಿಂಟಾಲ್ ಸಿಪ್ಪೆಅಡಿಕೆ, 40ಕೆ.ಜಿ. ಒಣ ಅಡಿಕೆ, ಮತ್ತು ಕೃತ್ಯಕ್ಕೆ ಬಳಸಿದ್ದ ಪಿಕ್‌ಆಪ್ ವಾಹನ ಹಾಗೂ ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4,05,750ರೂ. ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.