ಬಂಟ್ವಾಳ ನಗರ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಕೃಷಿಕರು

ಬಂಟ್ವಾಳ: ಅಡಿಕೆ ವ್ಯಾಪಾರಿಯೊಬ್ಬ ಬೆಳೆಗಾರರಿಂದ ಒಣ ಅಡಿಕೆ ಪಡೆದುಕೊಂಡು ಹಣ ನೀಡದೆ ವಂಚನೆ ಮಾಡಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದ ಕೃಷಿಕರು ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿ ಎ.ಬಿ. ಸುಪಾರಿ ಎಂಬ ಅಂಗಡಿ ಹೊಂದಿರುವ ನಾವೂರು ಗ್ರಾಮದ ಮೈಂದಾಳ ನಿವಾಸಿ ನೌಫಲ್ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಮನೆ ಬಂಟ್ವಾಳ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿದ್ದು, ಕೆಲವರು ಅಲ್ಲಿಯೂ ದೂರು ನೀಡಲು ತೆರಳಿದ್ದರು. ಅವರನ್ನು ನಗರ ಠಾಣೆಗೆ ಕಳುಹಿಸಲಾಯಿತು.
50ಕ್ಕೂ ಅಧಿಕ ಬೆಳೆಗಾರರಿಗೆ ವಂಚಿಸಿರುವ ಆರೋಪ ಕೇಳಿಬರುತ್ತಿದ್ದು, ದೂರು ನೀಡಿದವರಲ್ಲಿ ಸಾಕಷ್ಟು ಮಂದಿಗೆ ಲಕ್ಷಾಂತರ ರೂ. ನೀಡಲು ಬಾಕಿ ಇದೆ ಎನ್ನಲಾಗಿದ್ದು, ಹೀಗಾಗಿ ಒಟ್ಟು ವಂಚನೆಯ ಮೊತ್ತ ಕೋಟ್ಯಂತರ ರೂಪಾಯಿ ಆಗಬಹುದು ಎನ್ನಲಾಗಿದೆ. ಹಲವಾರು ಬೆಳೆಗಾರರು ಇನ್ನೂ ದೂರು ನೀಡಿಲ್ಲ ಎನ್ನಲಾಗಿದೆ. ಮಹಿಳೆಯೊಬ್ಬರು ಸ್ವಲ್ಪ ಸಮಯದ ಹಿಂದೆ ಆತನಿಗೆ ಅಡಿಕೆ ನೀಡಿದ್ದು, ಸಹಕಾರ ಸಂಘದಲ್ಲಿರುವ ತನ್ನ ಸಾಲದ ಮೊತ್ತ ಪಾವತಿಗೆ ಹಣ ಪಡೆಯಲು ಆತನ ಬಳಿ ಹೋದಾಗ ವ್ಯಾಪಾರಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ವಿಚಾರ ಎಲ್ಲರಿಗೂ ತಿಳಿದು ಮಂಗಳವಾರ ಬೆಳಗ್ಗೆ 50ಕ್ಕೂ ಅಧಿಕ ಬೆಳೆಗಾರರು ಆತನ ವಿರುದ್ಧ ದೂರು ನೀಡಲು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು.
ಮೊದಲೇ ಅಡಿಕೆ ನೀಡಿ, ಧಾರಣೆ ಹೆಚ್ಚಾದಾಗ ಲೆಕ್ಕಾಚಾರ!
ಕಳೆದ ಹಲವು ದಶಕಗಳಿಂದ ಆತ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಬೆಳೆಗಾರರ ವಿಶ್ವಾಸವನ್ನೂ ಗಳಿಸಿದ್ದನು. ಬೆಳೆಗಾರರು ಸುಲಿದ ಒಣ ಅಡಿಕೆಯನ್ನು ಆತನಿಗೆ ನೀಡಿ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಾದ ಸಂದರ್ಭದಲ್ಲಿ ಮಾರಾಟದ ಲೆಕ್ಕಾಚಾರ ಮಾಡುತ್ತಿದ್ದರು. ಈ ವೇಳೆ ಆತನಿಂದ ಕೊಂಚ ಹಣವನ್ನೂ ಪಡೆಯುತ್ತಿದ್ದು, ಈ ವ್ಯವಸ್ಥೆಯಿಂದ ರೈತರಿಗೆ ಹೆಚ್ಚಿನ ಧಾರಣೆ ಸಿಗುತ್ತಿತ್ತು. ಕೆಲವರು ಲೆಕ್ಕಾಚಾರ ಮಾಡಿದ ಬಳಿಕವೂ ಹಣವನ್ನು ಆತನ ಬಳಿಯೇ ಇರಿಸಿಕೊಳ್ಳುತ್ತಿದ್ದರು.
ಅಡಿಕೆ ಖರೀದಿಸಿದ ಬಳಿಕ ಆತ ನೀಡುವ “ಬಿಳಿ ಚೀಟಿ’ಯೇ ಅಧಿಕೃತ ದಾಖಲೆಯಾಗಿರುತ್ತಿತ್ತು. ಅಂದರೆ ಕೇವಲ ವಿಶ್ವಾಸದಿಂದ ನಡೆಯುವ ವ್ಯವಹಾರ ಅದಾಗಿತ್ತು. ಬೆಳೆಗಾರರು ಆತನ ಖಾಯಂ ಗ್ರಾಹಕರಾಗಿರುವ ಕಾರಣ ವ್ಯಾಪಾರಿಯೇ ಸಾಕಷ್ಟು ಕೃಷಿಕರ ಮನೆಗೆ ತೆರಳಿ ಅಡಿಕೆಯನ್ನು ತನ್ನ ವಾಹನದಲ್ಲಿ ತುಂಬಿಸಿ ತರುತ್ತಿದ್ದನು. ಆದರೆ ಕೆಲವು ಸಮಯಗಳ ಹಿಂದೆ ತಂದ ಅಡಿಕೆಯ ಹಣವನ್ನು ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೆಲವರಿಗೆ 30 ಲಕ್ಷ ರೂ.ಗಳಿಗೂ ಹೆಚ್ಚಿನ ಮತ್ತು ಇನ್ನು ಕೆಲವರಿಗೆ 50 ಸಾವಿರ ರೂ.ಗಳಷ್ಟು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳೆ ಸಾಲ ಪಾವತಿಸುವ ಸಮಯ
ಮೂಡನಡುಗೋಡು ಗ್ರಾಮದ ಕೃಷಿಕರೊಬ್ಬರು ನೀಡಿದ ದೂರಿನಂತೆ, ಅವರು ಪ್ರತೀ ವರ್ಷ ಸಹಕಾರ ಸಂಘದಿಂದ ಪಡೆದ ಬೆಳೆ ಸಾಲದ ಮೊತ್ತವನ್ನು ಬ್ಯಾಂಕ್‌ಗೆ ಸಂದಾಯ ಮಾಡಲು ಜೂನ್ ತಿಂಗಳಿನಲ್ಲಿ ಆತನಿಂದ ತಾವು ನೀಡಿದ ಅಡಿಕೆಯ ಮೊತ್ತವನ್ನು ಪಡೆಯುತ್ತಿದ್ದರು. ಅದೇ ರೀತಿ ಈ ವರ್ಷವೂ ಹಣ ಪಡೆಯಲು ಅಂಗಡಿಗೆ ಹೋದಾಗ ಬೀಗ ಹಾಕಲಾಗಿತ್ತು. ಮನೆಗೆ ಹೋದರೆ ಅಲ್ಲೂ ಬೀಗ ಸ್ವಾಗತಿಸಿತ್ತು. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ರೀತಿ ಸಾಕಷ್ಟು ಕೃಷಿಕರಿಗೆ ಬೆಳೆ ಸಾಲ ಸಂದಾಯ ಮಾಡುವ ಸಮಯವಾಗಿದೆ ಎನ್ನಲಾಗಿದೆ.




