ಮಂಗಳೂರು: ಭೂಗತಪಾತಕಿ ರವಿ ಪೂಜಾರಿ ಮತ್ತು ಕಲಿಯೋಗೀಶ ಸಹಚರನನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಧನ್ಯ ನಾಯಕ್ ಅವರ ನೇತೃತ್ವದ ತಂಡವು ಬಂಧಿಸಿದೆ.
ನಟೋರಿಯಸ್ ಶಾರ್ಪ್ ಶೂಟರ್, ಕೇರಳದ ಮಂಜೇಶ್ವರ ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ ಬಂಧಿತ ಆರೋಪಿಯಾಗಿದ್ದು, ಆರೋಪಿಯು ಜಿಲ್ಲೆಯ ಹಲವು ಠಾಣೆಗಳಲ್ಲಿ ವಾರೆಂಟ್ ಎದುರಿಸುತ್ತಿದ್ದನು.
ಆರೋಪಿ ಹನೀಫ್ ನಟೋರಿಯಸ್ ಕ್ರಿಮಿನಲ್ ಆಗಿದ್ದು, ರವಿಪೂಜಾರಿಯ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಯ ಎಲ್ಲ ಕೃತ್ಯಗಳಿಗೆ ಸಹಕರಿಸುತ್ತಿದ್ದು, ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಬಂಧನ ವಾರಂಟ್ ಎದುರಿಸುತ್ತಿದ್ದನು. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ, ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಮತ್ತು ಕೊಣಾಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.