ಅಪ್ಪಾ.. ಐ ಲವ್ ಯೂ ಪಾ…❤️ ಅಳತೆಗೇ ಸಿಗದು ಅಪ್ಪನ ಪ್ರೀತಿ…

Share with

ಪ್ರತೀ ಮನೆಗೆ ಅಮ್ಮ ಬೆಳಕು ನೀಡೋ ದೀಪವಾದ್ರೆ.. ಅಪ್ಪ ಅದರೊಳಗಿನ ಬೆಚ್ಚಗಿನ ಕಾವು. ಒಂದಿಷ್ಟು ಗದರುತನ, ಕೋಪ ಅಪ್ಪನೊಡನೆ ಕಾಣೋ ಸಂಚಾರಿ ಭಾವ, ಆದರೆ ಕೋಪದೊಳಗಿನ ಆಪ್ತತೆ ನಮ್ಮ ಒಳಿತಿಗಾಗಿಯೇ ಅಲ್ವಾ.. ಅಮ್ಮ ಸೊಂಟದಲ್ಲಿ ಮಗುವನ್ನಿಟ್ಟುಕೊಂಡು ತಾನು ಕಾಣುವ ಸಂಪತ್ತನ್ನು ತೋರಿಸಿದರೆ, ಅಪ್ಪ ಹೆಗಲ ಮೇಲೆ ಹೊತ್ತು ತಾನು ಕಾಣದಿರುವ ಜಗತ್ತನ್ನೂ ತನ್ನ ಮಗುವಿಗಾಗಿ ತೆರೆದಿಡುತ್ತಾನೆ.
ತಾಯಿ ಮೊದಲ ಅಕ್ಷರ ಕಲಿಸುವ ಗುರುವಾದರೆ,
ತಂದೆ ಜೀವನದ ಪಾಠ ಹೇಳುವ ಮುಖ್ಯೋಪಾಧ್ಯಾಯ. ಅಮ್ಮ ಕುಟುಂಬಕ್ಕಾಗಿ ದೇವರ ಮುಡುಪಿಟ್ಟರೆ, ಅಪ್ಪ ಬೇಕಿರುವುದನ್ನೆಲ್ಲ ತಂದುಕೊಡುವ ದೇವರಂತ ಸಂವಾಹಕ. ಪ್ರೀತಿ, ನಯ, ನಾಜೂಕು ಕಲಿಸುವುದು ಅಮ್ಮನ ಪಾಲಾದರೆ, ಶಿಸ್ತು, ಸ್ವಾಭಿಮಾನ, ಪರಿಶ್ರಮದ ಮಾರ್ಗದರ್ಶನ ಅಪ್ಪ ಮನೆಯಲ್ಲಿ ಕೇವಲ ಮಕ್ಕಳಿಗಷ್ಟೇ ಅಲ್ಲ, ಅಮ್ಮನನ್ನೂ ಸೇರಿಸಿ ಎಲ್ಲರ ಬೇಕು-ಬೇಡಗಳನ್ನು ಪೂರೈಸುವ ಅಪ್ಪ, ಅಮ್ಮನ ಪ್ರೀತಿಯ ಮುಂದೆ ತುಸು ಹಿಂದೆಯೇ ಉಳಿದು ಬಿಡುತ್ತಾನೆ. ಮನೆಯ ಕಪಾಠಿನಲ್ಲಾಗಲೀ, ಮಕ್ಕಳ ಪ್ರೀತಿಯಲ್ಲಾಗಲೀ, ಅಮ್ಮನದೇ ಸಿಂಹಪಾಲು, ಅದರಲ್ಲಿಯೇ ತನ್ನ ನೆಮ್ಮದಿ, ಸಾರ್ಥಕತೆಯನ್ನು ಕಾಣುವ ಜೀವವೇ ಅಪ್ಪ,
ಪ್ರತೀ ವರ್ಷದ ಜೂನ್ ಮೂರನೇ ರವಿವಾರವನ್ನು “ಅಪ್ಪಂದಿರ ದಿನ’ ಎಂದು ಆಚರಿಸುತ್ತಾರೆ.
ಆದರೆ ಕೇವಲ ಒಂದು ದಿನವಲ್ಲ ಮಗಳಿಗೆ ಪ್ರತೀ ದಿನವೂ, ಅನುಕ್ಷಣವೂ ಅಪ್ಪನ ದಿನವೇ. ಪ್ರತೀ ಹೆಣ್ಮಕ್ಕಳಿಗೆ ಅಪ್ಪನೇ ಮೊದಲ ಹೀರೋ. ತಂದೆಯ ನೆರಳಿನಲ್ಲಿ ಬೆಳೆದ ಪ್ರತೀ ಹೆಣ್ಣು ಬಯಸುವುದು ತನಗೆ ತನ್ನ ತಂದೆಯಂತಹ ಗಂಡು ಜೀವನದ ಸಂಗಾತಿಯಾಗಿ ಸಿಗಲಿ ಎಂದು. ತಾನು ಎಂತಹದ್ದೇ ಸಮಸ್ಯೆಗಳನ್ನು ಎದುರಿಸಿ ನಿಲ್ಲುತ್ತೇನೆ ಎಂಬ ಭರವಸೆಯ ಶಕ್ತಿ ಅಪ್ಪ, ಮಗಳಾಗಲಿ, ಮಗನಾಗಲಿ ಅಪ್ಪನ ಭರವಸೆಯ ಸ್ಪರ್ಶ, ಹೆಗಲು ತಾನು ಜೀವನದಲ್ಲಿ ಏನನ್ನಾದರೂ ಜಯಿಸುತ್ತೇನೆ ಎಂಬಂತಹ ಹುಮ್ಮಸ್ಸು, ಉತ್ಸಾಹವನ್ನು ಪುಟಿದೇಳಿಸುತ್ತದೆ. ಅಪ್ಪನೆಂಬ ಅಪ್ಪುಗೆ ಪ್ರತೀ ಮಗುವಿಗೂ ಶಕ್ತಿವರ್ಧಕ. ಮಕ್ಕಳ ಉತ್ತಮ, ಉನ್ನತ ಭವಿಷ್ಯಕ್ಕಾಗಿ ಶಿಕ್ಷೆ ಮತ್ತು ಶಿಕ್ಷಣ ನೀಡುವ ಪ್ರವರ್ತಕ ಅಪ್ಪ, ತಮ್ಮ ಆಸೆ, ನಿರೀಕ್ಷೆಗಳನ್ನು ತನ್ನ ಕುಟುಂಬದ ಒಳಿತಿನಲ್ಲೇ ಕಾಣುವ ಅಪ್ಪ, ತಮ್ಮ ಶ್ರಮ, ದಿನ ಅದಕ್ಕಾಗಿಯೇ ಮೀಸಲಿಡುತ್ತಾನೆ.
ನಿರೀಕ್ಷೆಗಳಿಲ್ಲದೆ ಪ್ರೀತಿ ಹಂಚುವ ತಾಯಿ-ತಂದೆಯ ಬಗೆಗೆ ಸಾಲುಗಳಲ್ಲಿ ಅಡಕ ಮಾಡಲು ಪದಗಳು ಸಾಲುವುದಿಲ್ಲ. ಅಮ್ಮನ ಪ್ರೀತಿ ಭೂಮಿಯಂತದ್ದು ಅದರ ಮಡಿಲೊಳಗೆ ಹುದುಗಬಹುದು. ಒಂದಿಷ್ಟು ಅಳತೆಗೂ ಆಗಬಹುದೇನೋ! ಅಪ್ಪನ ಪ್ರೀತಿ ಅಳತೆಗೆ ಸಿಗದ ಆಕಾಶ…


Share with

Leave a Reply

Your email address will not be published. Required fields are marked *