ಕಾಡಾನೆಗಳ ಓಡಿಸಲು ಕೃತಕ ಬುದ್ಧಿಮತ್ತೆಯ(AI) ‘ಕೂಗು’ ಕ್ಯಾಮೆರಾ!

Share with

ಮೈಸೂರು: ಕಾಡಂಚಿನ ಪ್ರದೇಶದಲ್ಲಿ ಇರುವ ಜಮೀನುಗಳಲ್ಲಿ ಬೆಳೆದಿರುವ ಬೆಳೆಯನ್ನು ಆನೆಗಳಿಂದ ರಕ್ಷಣೆ ಮಾಡಲು ಕೃತಕ ಬುದ್ಧಿಮತ್ತೆ ಆಧಾರಿತ ‘ಕೂಗು’ ಕ್ಯಾಮೆರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯ ಗಡಿಯಲ್ಲಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಈ ಕೂಗು ಕ್ಯಾಮೆರಾ ಅಳವಡಿಸಲಾಗಿದ್ದು. ಇದನ್ನು ಫಾರ್ಮ್ ಗಾರ್ಡ್ ( ತೋಟದ ಕಾವಲುಗಾರ) ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಈ ಕ್ಯಾಮೆರಾದಲ್ಲಿ ಸದ್ಯಕ್ಕೆ ಕಾಡನ್ನು ದಾಟಿ ಹೊರಬರುವ ಆನೆಗಳನ್ನು ಮಾತ್ರ ಗುರುತಿಸಿ, ಕ್ರಿಯಾಶೀಲವಾಗುವಂತಹ ಪ್ರೋಗ್ರಾಂ ಮಾತ್ರ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಆನೆಯ ರೂಪ ಕಂಡೊಡನೆ ತನ್ನ ಕೆಲಸವನ್ನು ಕ್ಷಣಾರ್ಧದಲ್ಲಿ ಶುರು ಮಾಡುತ್ತದೆ.

ಕಾರ್ಯಚರಣೆ ಹೇಗೆ?

ಕಾಡಾನೆಗಳು ಓಡಾಟ ನಡೆಸುವ ಹಾದಿಯ ಎದುರಿಗೆ ಈ ಕೂಗು ಕ್ಯಾಮೆರಾ ಅಳವಡಿಸಲಾಗಿದೆ. ಆನೆಯು ಕಾಡಿನಿಂದ ಹೊರಬರುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣ ಕ್ಯಾಮೆರಾದಲ್ಲಿ ಇರುವ ಧ್ವನಿವರ್ಧಕದ ಮೂಲಕ ಆನೆಯನ್ನು ವಿಚಲಿತಗೊಳಿಸುವ, ಭಯ ಬೀಳಿಸುವ ಸದ್ದುಗಳು ಜೋರಾಗಿ ಹೊರಡುತ್ತದೆ. ಪ್ರಾಕೃತಿಕವಾಗಿ ಆನೆಗೆ ಜೇನುನೋಣವೆಂದರೆ ತುಂಬಾ ಭಯ. ಹೀಗಾಗಿ ಅನಾಮಿಕರು ಹತ್ತಿರ ಹೋದಾಗ ಜೇನು ನೋಣಗಳ ಹಿಂಡು ಒಟ್ಟಾಗಿ ಎದುರಿಗೆ ಇರುವವರಿಗೆ ಭಯ ಹುಟ್ಟಿಸುವಂತೆ ‘ಗುಂಯ್’ ಎಂದು ಸದ್ದು ಮಾಡುವ ರೀತಿಯಲ್ಲಿ ಕ್ಯಾಮೆರಾದಿಂದ ಕೂಗು ಕೇಳಿಸುತ್ತದೆ.

ಇದಕ್ಕೆ ಹೆದರಿ ಆನೆ ವಾಪಸ್ ಕಾಲು ಕೀಳುತ್ತದೆ. ಈ ಸದ್ದೇ ಅಲ್ಲದೇ ಪಟಾಕಿ ಸಿಡಿಯುವ ಸದ್ದು, ಜನರು ಜೋರಾಗಿ ಕಿರುಚಿಕೊಳ್ಳುವ, ಸುದ್ದು, ಗುಡುಗು-ಸಿಡಿಲು ಶಬ್ದ, ಹೀಗೆ ಸುಮಾರು 20ಕ್ಕೂ ಹೆಚ್ಚು ಮಾದರಿ ಶಬ್ದಗಳಲ್ಲಿ ಕೂಗುತ್ತದೆ. ಒಂದೊಂದು ಸಲ ಒಂದೊಂದು ನಮೂನೆಯಲ್ಲಿ ಕೂಗುತ್ತದೆ. ಇದರಿಂದ ಆನೆ ಈ ಹಾದಿಯಲ್ಲಿ ಬರಲು ಅಳುಕುತ್ತದೆ. ಆದ್ದರಿಂದ ಜಮೀನುಗಳಲ್ಲಿ ಇರುವ ಬೆಳೆ ರಕ್ಷಣೆ ಮಾಡಿದಂತಾಗುತ್ತದೆ.

ಉಪಯೋಗ:

ಬೊಮ್ಮಲಾಪುರ ಹಾಡಿಯ ಸುತ್ತಮುತ್ತ ಸುಮಾರು 200 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಾರೆ. ಇಲ್ಲಿ ಮೊದಲು ಯಾವುದೇ ರಕ್ಷಣೆ ಇಲ್ಲದೇ ಇದ್ದರಿಂದ ಆನೆಗಳು ಆಗ್ಗಾಗ್ಗೆ ಕಾಡಿನಿಂದ ಹೊರಬಂದು ರೈತರ ಬೆಳೆಯನ್ನು ತಮ್ಮ ‘ಮೇವಾಗಿ’ ಬಳಕೆ ಮಾಡಿಕೊಳ್ಳುತ್ತಿದ್ದವು. ರಾತ್ರಿ ಸಮಯವು ಜಮೀನುಗಳಿಗೆ ನುಗ್ಗುತ್ತಿದ್ದವು. ಈಗ ಈ ಹಾದಿಯಲ್ಲಿ ಬರಲು ಹೆದರಿಕೊಳ್ಳುತ್ತಿರುವುದರಿಂದ ಬೆಳೆಗಳ ರಕ್ಷಣೆಯಾಗುತ್ತಿದೆ. ಅಲ್ಲದೇ ಈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಿ ಹಲವು ತಿಂಗಳಾಗಿವೆ. ಅಳವಡಿಕೆ ಬಳಿಕ ಇದುವರೆಗೂ ಆನೆಗಳು ದಾಟಿ ಬಂದಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

150 ಮೀಟರ್ ದೂರದಲ್ಲೇ ಪತ್ತೆ

ಯಾವುದೇ ಅಡೆ-ತಡೆ ಇಲ್ಲದೇ ಹೋದರೆ ಕ್ಯಾಮೆರಾವು ಆನೆಯನ್ನು ಸುಮಾರು 150 ಮೀಟ‌ರ್ ದೂರದಲ್ಲೇ ಪತ್ತೆ ಹಚ್ಚಿಬಿಡುತ್ತದೆ. ಆ ರೀತಿಯಾಗಿ ಗುರುತು ಹಿಡಿಯುವ ಕ್ಷಮತೆಯ ಪ್ರೋಗ್ರಾಂ ಅಳವಡಿಸಲಾಗಿದೆ. ಈ ಕೂಗು ಕ್ಯಾಮೆರಾಗೆ 1 ಲಕ್ಷ ರೂ. ಮೇಲೆ ಬೆಲೆ ಇದೆ. ಹೀಗಾಗಿ ಅತಿ ಅಗತ್ಯವಿರುವ ಕಡೆ ಅಥವಾ ಪರ್ಯಾಯ ಮಾರ್ಗವೇ ಇಲ್ಲ ಎನ್ನುವ ಜಾಗದಲ್ಲಿ ಅಳವಡಿಸಲು ಅರಣ್ಯ ಇಲಾಖೆ ಚಿಂತಿಸಿದೆ.

ಬೊಮ್ಮಲಾಪುರ ಹಾಡಿಯಲ್ಲೇ ಏಕೆ?

ಬೊಮ್ಮಲಾಪುರ ಹಾಡಿಯ ಪ್ರದೇಶದಲ್ಲಿ ಆನೆಗಳು ಕಾಡಿನಿಂದ ಹೊರಗೆ ಬರುವುದನ್ನು ತಡೆಗಟ್ಟಲು ಆನೆ ಕಂದಕ ನಿರ್ಮಿಸಲು ಆಗದ ಸ್ಥಿತಿಯಿದೆ. ಇಲ್ಲಿ ರೈಲ್ವೆ ಕಂಬಿಯ ಬ್ಯಾರಿಕೇಡ್ ಕೂಡ ಅಳವಡಿಸಲು ಸಾಧ್ಯವಾಗುವುದಿಲ್ಲ. ಸೋಲಾರ್ ತಂತಿಬೇಲಿಯೂ ದೂರದ ಮಾತೇ ಸರಿ. ಇದರಿಂದಾಗಿ ಅರಣ್ಯ ಇಲಾಖೆಯೂ ಇಲ್ಲಿ ಇಂತಹ ಎಐ ಆಧಾರಿತ ಕೂಗು ಕ್ಯಾಮೆರಾ ತಂತ್ರಜ್ಞಾನವನ್ನು ಅಳವಡಿಸಿದೆ.

ಹೇಗೆ ಕೆಲಸ ಮಾಡುತ್ತೆ?

1.ಕಾಡಾನೆಗಳು ಓಡಾಟ ನಡೆಸುವ ಹಾದಿಯ ಎದುರಿಗೆ ಈ ಕೂಗು ಕ್ಯಾಮೆರಾ ಅಳವಡಿಸಲಾಗುತ್ತದೆ.

2.ಆನೆಯು ಕಾಡಿನಿಂದ ಹೊರಬರುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣ ಕ್ಯಾಮೆರಾ ಸದ್ದು ಮಾಡಲು ಆರಂಭಿಸುತ್ತದೆ

3.ಧ್ವನಿವರ್ಧಕದ ಮೂಲಕ ಆನೆಯನ್ನು ವಿಚಲಿತಗೊಳಿಸುವ, ಭಯ ಬೀಳಿಸುವ ಸದ್ದುಗಳು ಜೋರಾಗಿ ಹೊರಡುತ್ತದೆ.

4.ಆನೆ ಹೆದರುವಂಥ ಜೇನುನೋಣ, ಪಟಾಕಿ, ಗುಡುಗು-ಸಿಡಿಲು ಸದ್ದು ಸೇರಿ 20ಕ್ಕೂ ಹೆಚ್ಚು ಶಬ್ದಗಳು ಹೊರಬೀಳುತ್ತದೆ

5.ಇದಕ್ಕೆ ಹೆದರಿ ಆನೆ ವಾಪಸ್ ಕಾಲು ಕೀಳುತ್ತದೆ. ಈ ಹಾದಿಯಲ್ಲಿ ಮತ್ತೆ ಬರಲು ಅಳುಕುತ್ತವೆ. ಹೀಗಾಗಿ ಜಮೀನುಗಳಲ್ಲಿ ಇರುವ ಬೆಳೆ ರಕ್ಷಣೆಯಾಗುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಬೊಮ್ಮಲಾಪುರ ಹಾಡಿ ಪ್ರದೇಶದಲ್ಲಿ ಫಾರ್ಮ್ ಗಾರ್ಡ್ ಕ್ಯಾಮೆರಾ ಅಳವಡಿಸಿರುವುದರಿಂದ ಆನೆಗಳ ಹಾವಳಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಇಂತಹ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗುತ್ತದೆ. – ಪಿ.ಎ. ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಹುಣಸೂರು


Share with

Leave a Reply

Your email address will not be published. Required fields are marked *