ಟೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದಿರುವಂತೆಯೇ ಕದನ ವಿರಾಮಕ್ಕೆ ಸಂಬಂಧಿಸಿ ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಸೋಮವಾರ ಇರಾನ್ ಮತ್ತು ಅಮೆರಿಕದ ಮುಂದಿಟ್ಟಿರುವ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ.

ಇದರಿಂದ ಕೆರಳಿ ಕೆಂಡವಾಗಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಒಪ್ಪಂದಕ್ಕೆ ಒಪ್ಪದೇ ಇರುವ ಇರಾನ್ ಅನ್ನು ಸುಮ್ಮನೆ ಬಿಡಲ್ಲ. ಇರಾನ್ ಅನ್ನು ನಾಶ ಮಾಡಲು ನಮಗೆ ಒಂದು ರಾತ್ರಿ ಸಾಕು, ಆ ರಾತ್ರಿ ಮಂಗಳವಾರವೇ ಆಗಿರಬಹುದು’ ಎಂದು ಹೇಳುವ ಮೂಲಕ ಭಾರೀ ದಾಳಿಯ ಸುಳಿವು ನೀಡಿದ್ದಾರೆ. ಹೊರ್ಮುಜ್ ಜಲಸಂಧಿ ತೆರೆಯಲು ಮತ್ತು ಒಪ್ಪಂದಕ್ಕೆ ಬರಲು ಇರಾನ್ಗೆ ಟ್ರಂಪ್ ಹಾಕಿದ್ದ ಗಡುವು ಮಂಗಳವಾರ ಮುಗಿಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಸೋಮವಾರ ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ) ದೇಶವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಇತ್ತೀಚೆಗೆ ಇರಾನ್ ನೆಲದಲ್ಲಿ ಬಿದ್ದಿದ್ದ ತಮ್ಮ ಪೈಲಟ್ ಅನ್ನು ರಕ್ಷಿಸಿದ ಬಗೆಯನ್ನು ವಿವರಿಸುವ ಜೊತೆಗೆ, ಇರಾನ್ ಮೇಲೆ ದಾಳಿ ತೀವ್ರಗೊಳಿಸುವ ಸುಳಿವನ್ನೂ ನೀಡಿದರು.
ಇದಕ್ಕೂ ಮುನ್ನ, ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಫ್ಟಿ ಅವರೊಂದಿಗೆ ಮಾತುಕತೆ ನಡೆಸಿ, 2 ಹಂತದ ಶಾಂತಿ ಯೋಜನೆಯನ್ನು ಮುಂದಿಟ್ಟಿದ್ದರು. ಅದರಂತೆ, ಮೊದಲ ಹಂತದಲ್ಲಿ ತತ್ಕ್ಷಣವೇ ಕದನ ವಿರಾಮ ಘೋಷಿಸುವುದು, 2ನೇ ಹಂತದಲ್ಲಿ ವಿಸ್ತ್ರತ ಮತ್ತು ಸಮಗ್ರ ಒಪ್ಪಂದಕ್ಕೆ ಬರುವ ಸಲುವಾಗಿ ಸಂಧಾನ ಮಾತುಕತೆ ನಡೆಸಲು ಪ್ರಸ್ತಾಪಿಸಲಾಗಿತ್ತು.
ಪಟ್ಟು ಬಿಡದ ಇರಾನ್?
ಮೊದಲು 45 ದಿನ ಕದನ ವಿರಾಮ ಘೋಷಿಸಿ, ಹೊರ್ಮುಜ್ ಜಲಸಂಧಿಯನ್ನು ನೌಕೆಗಳ ಸಂಚಾರಕ್ಕೆ ಮುಕ್ತಗೊಳಿಸುವುದು. ನಂತರ 15-20 ದಿನಗಳಲ್ಲಿ ಮುಖಾಮುಖಿ ಮಾತುಕತೆ ನಡೆಸಿ ಸಂಧಾನಕ್ಕೆ ಬರುವುದು ‘ಇಸ್ಲಾಮಾಬಾದ್ ಒಪ್ಪಂದ’ದಲ್ಲಿರುವ ಪ್ರಸ್ತಾಪವಾಗಿತ್ತು. ಆದರೆ, ಇದಕ್ಕೆ ಒಪ್ಪದ ಇರಾನ್, 10 ಅಂಶಗಳ ಷರತ್ತನ್ನು ತಾನೇ ಮುಂದಿಟ್ಟಿದ್ದಲ್ಲದೆ, ಯುದ್ಧಪೂರ್ವದಲ್ಲಿ ಹೊರ್ಮುಜ್ನಲ್ಲಿ ಪರಿಸ್ಥಿತಿ ಹೇಗಿತ್ತೋ ಆ ಸ್ಥಿತಿಗೆ ಇನ್ಯಾವತ್ತೂ ಮರಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು.
ಇರಾನ್ ತಕ್ಕ ಬೆಲೆ ತೆರಲಿದೆ
ಕದನ ವಿರಾಮಕ್ಕೆ ಸಂಬಂಧಿಸಿದ 2 ಅಂಶಗಳ ಪ್ರಸ್ತಾಪವು ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ, ಇರಾನ್ ಸರ್ಕಾರದ ನಿಲುವು ನನಗೆ ಒಪ್ಪಿಗೆಯಾಗುತ್ತಿಲ್ಲ. ಈ ಪ್ರಸ್ತಾವನೆಗೆ ಅವರು ಒಪ್ಪದೇ ಇದ್ದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ – ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ




