ಬಂಟ್ವಾಳ: ಪತಿ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ: ಪತ್ನಿ ಹಾಗೂ ಆಕೆಯ ಸಹೋದ್ಯೋಗಿ ವಿರುದ್ದ ದೂರು ದಾಖಲು!

Share with

ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನಲೆ ಪತ್ನಿ ತನ್ನ ಗೆಳೆಯನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಲು ಕಾರು ಹತ್ತಿಸಿದ ಘಟನೆಯು ಬಂಟ್ವಾಳ ಪಾಣಿಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಇದೀಗ ಪತಿಯು ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ.

ಪತಿ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ

ಜನವರಿ 23ರಂದು ಈ ಘಟನೆ ನಡೆದಿದ್ದು ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಎಂಬವರ ಮೇಲೆ ದೂರು ದಾಖಲಾಗಿದೆ.

ಕಿಶೋರ್ ಕುಮಾರ್ ಬೋಳಾರ್ ನೀಡಿರುವ ದೂರಿನ ಪ್ರಕಾರ ಶುಭಾ ರವರನ್ನು 2008ರಲ್ಲಿ ಮದುವೆಯಾಗಿ 12 ವರ್ಷದ ಹೆಣ್ಣು ಮಗಳಿದ್ದು, ಪಿರ್ಯಾದಿದಾರರು ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿಯೂ, ಅವರ ಪತ್ನಿ ಸರ್ಕಾರಿ ಶಾಲಾ ಅಧ್ಯಾಪಕಿಯಾಗಿ ಕೆಲಸ ಮಾಡಿಕೊಂಡಿದ್ದಾರೆ.

ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಸಾರಾ ಆರ್ಕೆಡ್ ಎಂಬ ವಸತಿ ಗೃಹದಲ್ಲಿ ವಾಸವಾಗಿದ್ದರು. ಈ ನಡುವೆ ಕಿಶೋರ್ ಅವರ ಪತ್ನಿ ಶುಭಾರವರ ಮೊಬೈಲಿಗೆ ಸಹದ್ಯೋಗಿಯಾಗಿರುವ 2 ನೇ ಆರೋಪಿ ಶಿವಪ್ರಸಾದ್ ಶೆಟ್ಟಿ ಎಂಬಾತನು ಅಕ್ಷೇಪಾರ್ಹ ಸಂದೇಶ ಕಳುಹಿಸಿದ್ದು ಕಂಡುಬಂದಿದೆ. ಇದನ್ನು ನೋಡಿ ಕಿಶೋರ್ ಆಕ್ಷೇಪಿಸಿದ್ದಾರೆ.

ಇದರ ಬಳಿಕ ಕೌಟುಂಬಿಕ ತಕಾರರು ಪ್ರಾರಂಭವಾಗಿದ್ದು, ದಿನಾಂಕ: 13.05.2021ರಂದು ಶುಭಾ ಅವರು ತನ್ನ ತವರು ಮನೆಗೆ ಮಗಳೊಂದಿಗೆ ಹೋಗಿರುತ್ತಾರೆ. ಆ ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇಧನ ಕೋರಿ ದಾವೆ ಸಲ್ಲಿಸಿದ್ದಾರೆ. ಈ ನಡುವೆ ಸದ್ರಿ ದಾವೆಗೆ ಕಿಶೋರ್ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದಿರುತ್ತಾರೆ. ತದನಂತರ 1ನೇ ಆರೋಪಿತೆಯು ಪಿರ್ಯಾದಿದಾರರ ವಾಸ ಇರುವ ಮೆಲ್ಕಾರ್ ನಲ್ಲಿರುವ ಮನೆಯನ್ನು ತೆರವುಗೊಳಿಸಲು ದಾವೆ ಹೊಡಿದ್ದು, ವಿಚಾರಣೆಯಲ್ಲಿರುತ್ತದೆ.

ಕಿಶೋರ್ ಕುಮಾರ್ ಜ.23ರಂದು ಮೆಲ್ಕಾರಿನಲ್ಲಿರುವ ತನ್ನ ಮನೆಗೆ ಬಂದ ವೇಳೆ ಆರೋಪಿಗಳಾದ ಶುಭಾ, ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರು ರೌಡಿಗಳೊಂದಿಗೆ ಬಂದು ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ಆರೋಪಿ ಶಿವಪ್ರಸಾದ್ ಶೆಟ್ಟಿಯು ತಾನು ಶುಭಾಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಕೂಡ ಹೇಳಿಕೊಂಡಿದ್ದಾನೆ. ಈ ವೇಳೆ ಶುಭಾ ಮನೆಯ ಕೀಲಿಗೈ ತೆಗೆಯುತ್ತಿರುವಂತೆ ಭಾಸವಾದಾಗ ಕಿಶೋರ್ ತಡೆಯಲು ಮುಂದಾದ ವೇಳೆ ಅವರಿಗೆ ಹಲ್ಲೆ ನಡೆಸಲಾಗಿದೆ.

ಈ ಘಟನೆ ಬಳಿಕ ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ವೇಳೆ ಕಿಶೋರ್ ತಡೆದಾಗ ಶಿವಪ್ರಸಾದ್, ಕಿಶೋರ್ ಅವರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆ ಮತ್ತು ಕಾರು ಡಿಕ್ಕಿಯ ಆಘಾತದಿಂದ ಕಿಶೋರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ಮತ್ತೆ ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಕಿಶೋರ್ ಅವರ ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *