ಬಂಟ್ವಾಳ: ವಿಶ್ವ ಹಿಂದು ಪರಿಷದ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ಬಜರಂಗದಳ ವತಿಯಿಂದ ಶೌರ್ಯ ಜಾಗರಣಾ ಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಜಾಗೃತ ಹಿಂದು ಸಮಾವೇಶ ನಡೆಯಿತು. ಮಧ್ಯಪ್ರದೇಶದ ಸಾಧ್ವಿ ದೇವಿ ಸರಸ್ವತಿ ಜೀ ಅವರು ದಿಕ್ಸೂಚಿ ಭಾಷಣ ಮಾಡಿ ಹಿಂದುಗಳಲ್ಲಿ ಒಗ್ಗಟ್ಟು ಇರಬೇಕು ಎಂದ ಅವರು ನಾವು ಸಂಘಟನೆ ಅಡಿಯಲ್ಲಿ ಒಂದೇ ಜಾತಿಗೆ ಸೇರಿದವರು, ನಮ್ಮಲ್ಲಿ ಒಗ್ಗಟ್ಟಿರಬೇಕು ಎಂದರು.
ಆರೆಸ್ಸೆಸ್ ನ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಮಾತನಾಡಿ ವಿ.ಹಿಂ.ಪ ಹಾಗೂ ಬಜರಂಗದಳ ಕಾರ್ಯಕರ್ತರು ವಿರಮಿಸದೆ ಕೆಲಸ ಮಾಡಬೇಕು ಎಂದರು.
ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿ ರಘು ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸಂತರಾದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಕಣಿಯೂರು ಮಹಾಬಲ ಸ್ವಾಮೀಜಿ ವಿ.ಹಿಂ.ಪ ಕರ್ನಾಟಕ ದ.ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ.ಪುರಾಣಿಕ್ ಮತ್ತು ವಿ.ಹಿಂ.ಪ ಪುತ್ತೂರು ಜಿಲ್ಲಾಧ್ಯಕ್ಷ ಡಾ|ಕೃಷ್ಣ ಪ್ರಸನ್ನ ಅವರು ಭಾಗವಹಿಸಿದ್ದರು.
ವಿಶ್ವ ಹಿಂದು ಪರಿಷತ್ ಬಂಟ್ವಾಳ ಅಧ್ಯಕ್ಷ ಹಾಗೂ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬಿ. ಭಾಸ್ಕರ ರಾವ್ ಪ್ರೇರಣಾ ಗೀತೆ ಹಾಡಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಚಿನ್ ಮೆಲ್ಕಾರ್ ವಂದಿಸಿದರು.
ಶೌರ್ಯ ಜಾಗರಣಾ ರಥಯಾತ್ರೆ ಬಂಟ್ವಾಳ ತಾಲೂಕಿಗೆ ಭಾನುವಾರ ಆಗಮಿಸಿದ್ದು, ಬಿ.ಸಿ.ರೋಡ್ ಸಮೀಪ ಬಸ್ತಿಪಡ್ಪುವಿನಲ್ಲಿ ಜಾಗೃತ ಹಿಂದು ಸಮಾವೇಶ ನಡೆಯಿತು. ಇದಕ್ಕೂ ಮುನ್ನ ಮಾಣಿ ಜಂಕ್ಷನ್ ಗೆ ಯಾತ್ರೆ ಪ್ರವೇಶಿಸಿ, ಅಲ್ಲಿ ಸಂಘ ಪರಿವಾರದ ಪ್ರಮುಖರು ಪುಷ್ಪಾರ್ಚನೆ ಮೂಲಕ ರಥವನ್ನು ಸ್ವಾಗತಿಸಿದರು. ಆರೆಸ್ಸೆಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾಧ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸಹಿತ ಪ್ರಮುಖರು ಸಭೆಯಲ್ಲಿದ್ದರು.