ಬಂಟ್ವಾಳ: ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಗಡಿಯಾರ ಎಂಬಲ್ಲಿ ಕೊಡಲಿ ರೂಪದ ಪೆನ್ಸಿಲ್‌ಗಳು ಕಂಡುಬಂದಿದ್ದು, ಈ ರೀತಿಯ ಪೆನ್ಸಿಲ್ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಕೆದಿಲ ಗ್ರಾಮದ ಗಡಿಯಾರ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು, ಪೋಷಕರು ಈ ರೀತಿಯ ಪೆನ್ಸಿಲ್ ನ ವಿರುದ್ದ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಈ ಮಾರಾಟಗಾರರು ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು ತಿಳಿಸುತ್ತಾರೆ. ಎರಡು ದಿನಗಳ ನಂತರ ಬಂದು ಪೆನ್ಸಿಲ್ ನೀಡುತ್ತಾರೆ ಎಂದು ಪೋಷಕರು ತಿಳಿಸಿದ್ದಾರೆ.
20 ರೂಪಾಯಿ ಮುಖ ಬೆಲೆಯ ಈ ಪೆನ್ಸಿಲ್ ನೋಡಲು ಬಲು ಸುಂದರವಾಗಿದೆ, ಆದರೂ ಅದರ ಒಂದು ಭಾಗದಲ್ಲಿ ಕೊಡಲಿಯನ್ನು ಹೋಲುವ ಶೈಲಿಯಲ್ಲಿ ಇರುವುದರಿಂದ ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚು ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ವಿವಾದಾತ್ಮಕ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂಬುದು ಪೋಷಕರ ಒತ್ತಾಯವಾಗಿದೆ.
ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.