ಬಂಟ್ವಾಳ: ಪುತ್ತೂರಿನ ದರ್ಬೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಬಿ.ಸಿ ರೋಡ್ ಶಾಖೆಯನ್ನು ಸೆ.20ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಹಿಂಭಾಗದ ಪಾರ್ಕ್ ಸ್ಕ್ವೇರ್ ನ ಪ್ರಥಮ ಮಹಡಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸುವರು ಎಂದು ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು 14ನೇ ಶಾಖೆಯಾಗಿದ್ದು, ಈಗಾಗಲೇ ಉತ್ತಮ ವ್ಯವಹಾರವನ್ನು ನಡೆಸಿ ನಾಲ್ಕು ಬಾರಿ ಸಾಧನಾ ಪ್ರಶಸ್ತಿ ಹಾಗೂ ಅವಿಭಜಿತ ಜಿಲ್ಲೆಗಳಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಪುರಸ್ಕಾರವನ್ನು ಪಡೆದುಕೊಂಡಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುವ ದೃಷ್ಟಿಯಿಂದ ನಾನಾ ಕಡೆಗಳಲ್ಲಿ ಶಾಖೆ ತೆರೆಯಲಾಗಿದ್ದು, ಬಂಟ್ವಾಳದ ವಿಟ್ಲ, ಸಾಲೆತ್ತೂರುಗಳಲ್ಲಿ ಶಾಖೆಗಳಿವೆ. 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಘದ 14ನೇ ಶಾಖೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಹಿಸಲಿದ್ದು, ಭದ್ರತಾ ಕೊಠಡಿಯನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ ಅವರು ಉದ್ಘಾಟಿಸುವರು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ವಂದನೀಯ ಫಾ. ವಲೇರಿಯನ್ ಡಿ’ಸೋಜ ಅವರು ಕಂಪ್ಯೂಟರ್ ಅನ್ನು ಉದ್ಘಾಟಿಸುವರು. ಪೊಳಲಿ ಸೇವಾ ಸಹಕಾರ ಸಂಘದ ನಿರ್ದೇಶಕ ಅಬುಬಕರ್ ಅಮ್ಮುಂಜೆ ಅವರು ಪ್ರಥಮ ಠೇವಣಿಪತ್ರವನ್ನು ಬಿಡುಗಡೆ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರಾದ ಬಿ. ಮಹಾಬಲ ರೈ ಬೋಳಂತೂರು, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಮಹಾಪ್ರಬಂಧಕರಾದ ವಸಂತ್ ಜಾಲಾಡಿ, ಶಾಖಾ ವ್ಯವಸ್ಥಾಪಕರಾದ ವಿನೋದ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.