ಮಂಗಳೂರು: ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ನ.22ರಂದು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು ಭವ್ಯ ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.
ನಗರ ಬಿಜೆಪಿ ಕಚೇರಿಯ ಸುದ್ಧಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ನಾಯಕರ ತೀರ್ಮಾನದ ಮೇರೆಗೆ ದೊಡ್ಡ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ. ನಮ್ಮ ಕರಾವಳಿ ಭಾಗದ ಎಲ್ಲಾ ಕಾರ್ಯಕರ್ತರಿಗೆ ನಾನು ಹೇಳೋದು ಏನು ಅಂದ್ರೆ, ರಾಜ್ಯಾಧ್ಯಕ್ಷ ಜವಾಬ್ದಾರಿಯುತ ಸ್ಥಾನವಾಗಿದೆ. ಹಿಂದಿನ ಯಶಸ್ವಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಂತೆ ನನ್ನ ಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ನಿರ್ವಹಣೆಯ ಬಗ್ಗೆ ಚರ್ಚಿಸಬೇಕಾದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಚಿವರು ಮುಂದಿನ ಲೋಕಸಭಾ ಚುನಾವಣೆ, ನಿಗಮ ಮಂಡಳಿ ನೇಮಕಾತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಸರಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಈ ಎಲ್ಲ ವಿಚಾರವಾಗಿ ಮುಂದಿನ ಅಧಿವೇಶನದಲ್ಲಿ ಸರಕಾರದ ಕಿವಿ ಹಿಂಡುವ ಕೆಲಸ ಬಿಜೆಪಿ ಮಾಡಲಿದೆ ಎಂದು ವಿಜಯೇಂದ್ರ ಅವರು ಹೇಳಿದರು.
ವಿದ್ಯುತ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ವೈ ವಿಜಯೇಂದ್ರ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರಕಾರವು ಬೇಸಿಗೆಯಲ್ಲಿ ರೈತರಿಗೆ ತೊಂದರೆ ಆಗಬಾರದೆಂದು ಕನಿಷ್ಠ 7 ಗಂಟೆ ವಿದ್ಯುತ್ ಕೊಟ್ಟಿತ್ತು. ಆದರೆ ಈಗಿನ ಸರಕಾರದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಪರದಾಡುತ್ತಿದ್ಧಾರೆ ಎಂದರು.
ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಜಮೀರ್ ಅಹ್ಮದ್ ಖಾನ್ ಅವರು ಸ್ವೀಕರ್ ಸ್ಥಾನದ ಗೌರವಕ್ಕೆ ಚ್ಯುತಿಯಾಗುವಂತೆ ಮಾತನಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಅವರ ರಾಜೀನಾಮೆ ಪಡೆಯಬೇಕು ಎಂದು ವಿಜಯೇಂದ್ರ ಅವರು ಒತ್ತಾಯಿಸಿದರು.
ಸುದ್ದಿಗೋಷ್ಟಿ ಮುಗಿಸಿ ಚುನಾವಣಾ ಕಾರ್ಯಾಲಯದಿಂದ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಿ.ವಿ.ನಾಯಕ್ ಹಾಲ್ ನತ್ತ ವಿಜಯೇಂದ್ರ ಅವರಿಗೆ ಸಾವಿರಾರು ಕಾರ್ಯಕರ್ತರಿಂದ ರಸ್ತೆಯುದ್ದಕ್ಕೂ ಪುಷ್ಪ ವೃಷ್ಟಿ, ಬೊಂಬೆಯಾಟ, ಚೆಂಡೆ, ನಾಸೀಕ್ ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ತೆರಳುತ್ತಿದ್ದ ವೇಳೆ ಸಿ.ವಿ ನಾಯಕ್ ಹಾಲ್ ಬಳಿ ಕ್ರೇನ್ ಮೂಲಕ 250 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.