ಮಂಜೇಶ್ವರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ಮಂಜೇಶ್ವರ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಹೊಸ ಬಟ್ಟೆ ತೊಟ್ಟು, ವಾಹನಗಳಲ್ಲಿ ನಗರದ ಈದ್ಗಾ ಮೈದಾನಕ್ಕೆ ತೆರಳಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಇಸ್ಲಾಮಿನ ಪ್ರವಾದಿಗಳ ಪೈಕಿ, ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ತ್ಯಾಗ ಮಾಡಿ ದೇಶಾಂತರ ಹೊರಟು, ದೇವರ ಆದೇಶದಂತೆ ವೃದ್ಧಾಪ್ಯದಲ್ಲಿ ಸ್ವಂತ ಮಗನನ್ನೂ ಬಲಿ ಕೊಡಲು ಹೊರಟ ಪ್ರವಾದಿ ಇಬ್ರಾಹಿಂ ಇತಿಹಾಸವನ್ನು ನೆನಪಿಸುವುದೇ ಬಕ್ರೀದ್ ಹಬ್ಬ.
ಉದ್ಯಾವರ ಜುಮಾ ಮಸೀದಿಯಲ್ಲಿ ನಡೆದ ಈದ್ ನಮಾಜ್ ಗೆ ಮಸೀದಿ ಖತೀಬ್ ಅಬ್ದುಲ್ ಕರೀಂ ಧಾರಿಮಿ ನೇತೃತ್ವ ನೀಡಿದರು. ಅದೇ ರೀತಿ ಕುಂಜತ್ತೂರು ಮಸ್ಜಿದ್ ನೂರ್ ಸಲಫಿ ಮಸೀದಿಯಲ್ಲಿ ಅಬ್ದುಲ್ ಖುದ್ದೂಸ್, ದಾರುಸ್ಸಲಾಂ ಸಲಫಿ ಜುಮಾ ಮಸೀದಿಯಲ್ಲಿ ಮೊಹಮ್ಮದಲಿ ಸಲಫಿ, ಕುಂಜತ್ತೂರು ಜುಮಾ ಮಸೀದಿಯಲ್ಲಿ ಹಾಶಿರ್ ಹಾಮಿದಿ, ಪೊಸೋಟು ಜುಮಾ ಮಸೀದಿಯಲ್ಲಿ ಶಬೀರ್ ಫೈಝಿ, ಉಪ್ಪಳ ಬದ್ರಿಯಾ ಜುಮಾ ಮಸೀದಿಯಲ್ಲಿ ಇಬ್ರಾಹಿಂ ಹನೀಫಿ ಮೊದಲಾದವರು ನೇತೃತ್ವ ನೀಡಿದರು.