ಬಂಟ್ವಾಳ: ಚಿನ್ನದ ಸರ ಕಸಿದ ಪ್ರಕರಣ; ಆರೋಪಿಗಳ ಬಂಧನ

Share with

ಬಂಟ್ವಾಳ: ಬಂಟ್ವಾಳ ನಗರ ಪೊಲೀಸರು ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿಯ ಅಂಗಡಿಯೊಂದರಲ್ಲಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದೂವರೆ ಪವನಿನ ಚಿನ್ನದ ಸರ ಹಾಗೂ ಬೈಕನ್ನು ವಶಪಡಿಸಲಾಗಿದೆ

ಬಂಧಿತ ಆರೋಪಿಗಳನ್ನು ಮಂಗಳೂರು ಬೈಕಂಪಾಡಿಯ ಅಶೋಕ ಹಾಗೂ ಮಂಗಳೂರು ದಂಬೇಲ್ ನಿವಾಸಿ ಸಚಿನ್ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳಿಂದ ಒಂದೂವರೆ ಪವನಿನ ಚಿನ್ನದ ಸರ ಹಾಗೂ ಬೈಕನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.14ರಂದು ಬಿ.ಸಿ ರೋಡಿನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಅಂಗಡಿಯೊಂದಕ್ಕೆ ಬಂದ ಆರೋಪಿಗಳು ಅಂಗಡಿ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಚೈನ್ ಎಗರಿಸಿ ಪರಾರಿಯಾಗಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಟ್ವಾಳ ಉಪ ವಿಭಾಗದ ಡಿ.ವೈ.ಎಸ್.ಪಿ ವಿಜಯ ಪ್ರಸಾದ್‌ ಅವರ ನಿರ್ದೇಶನದಂತೆ ಇನ್ಸ್‌ ಪೆಕ್ಟರ್ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರಾಮಕೃಷ್ಣ ಕಲೈಮಾರ್ ಮತ್ತವರ ಸಿಬ್ಬಂದಿ ಇರ್ಷಾದ್, ರಾಜೇಶ್, ಗಣೇಶ್, ಮೋಹನ ಹಾಗೂ ವಿವೇಕ್ ಅವರು ಬೆಂಜನಪದವಿನ ಕರಾವಳಿ ಸೈಟ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.

ಈ ಕೃತ್ಯಕ್ಕೆ ಸಂಬಂಧಿಸಿ ಅರೋಪಿಗಳ ಯಾವುದೇ ಸುಳಿವು ಇರಲಿಲ್ಲ, ಘಟನಾ ಸ್ಥಳದಲ್ಲಿ ಸಿ.ಸಿ ಕ್ಯಾಮರ ಕೂಡ ಇರದಿದ್ದು, ವಾರದೊಳಗೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ನಗರ ಠಾಣಾ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ತಂಡಕ್ಕೆ ಪೊಲೀಸ್‌ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.


Share with

Leave a Reply

Your email address will not be published. Required fields are marked *