ಬಂಟ್ವಾಳ ಜಕ್ರಿಬೆಟ್ಟು ಡ್ಯಾಂ ಮತ್ತು ಬ್ಯಾರೇಜ್ ಗೆ ವರ್ಟಿಕಲ್ ಗೇಟ್ ಅಳವಡಿಸಿ ಪ್ರಾಯೋಗಿಕ ನೀರು ಶೇಖರಣೆ

Share with

ಬಂಟ್ವಾಳ: ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನಿರ್ಮಾಣವಾದ ಡ್ಯಾಂ ನಲ್ಲಿ ಗೇಟ್ ಅಳವಡಿಸಿ ಪ್ರಾಯೋಗಿಕವಾಗಿ ನೀರು ಶೇಖರಣೆ ಮಾಡಿ ಸಾಮರ್ಥ್ಯ ಪರೀಕ್ಷೆ ನಡೆಸಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ.135 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಡ್ಯಾಂ ಮತ್ತು ಬ್ಯಾರೇಜ್ ಕಾಮಗಾರಿ ಸಂಪೂರ್ಣಗೊಂಡಿದ್ದು, ಇಂದು ಗೇಟ್ ಅಳವಡಿಸಿ ನೀರು ಶೇಖರಿಸಿ ಸಾಮರ್ಥ್ಯ ಪರೀಕ್ಷೆ ನಡೆಸಿದರು.
ಕಾರ್ಯಪಾಲಕ ಇಂಜಿನಿಯರ್ ಸಹ್ಯದ್ ಅತಿಕುರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯ್ ಶೆಟ್ಟಿ ಮತ್ತು ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಅವರು ಡ್ಯಾಂ ಗೆ ವರ್ಟಿಕಲ್ ಲಿಪ್ಟ್ ಗೇಟ್ ಅಳವಡಿಸಿ ಸುಮಾರು 4.50 ಮೀ ಎತ್ತರಕ್ಕೆ ನೀರು ಶೇಖರಣೆಗೊಳಿಸಿ, ಗುಣಮಟ್ಟದ ಜೊತೆ ಸಾಮರ್ಥ್ಯ ಪರಿಶೀಲನೆ ನಡೆಸಿದರು.
ನೀರು ಶೇಖರಣೆಯಾದ ಸಂದರ್ಭದಲ್ಲಿ ನೀರು ಸೋರುವಿಕೆಯಾಗುತ್ತದೆ ಎಂಬುದರ ಪರೀಕ್ಷೆ ನಡೆಸಿದ್ದಾರೆ.
ಮಳೆಗಾಲವಾದ ಕಾರಣ ನೀರನ್ನು ಇಲಾಖೆಯ ಮಟ್ಟದ ವರೆಗೆ ನೀರು ಶೇಖರಣೆ ಮಾಡುವುದು ಅಪಾಯಕಾರಿಯಾದ ಹಿನ್ನೆಲೆಯಲ್ಲಿ 4.50 ಮೀ ವರೆಗೆ ನೀರು ಶೇಖರಣೆ ಮಾಡಿ ಪರೀಕ್ಷೆ ನಡೆಸಿದ ಅವರು ಬಳಿಕ ಗೇಟನ್ನು ತೆರವುಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಿಂದ ನರಿಕೊಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯಲ್ಲದೆ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಮತ್ತು ಜಕ್ರಿಬೆಟ್ಟುವಿನಿಂದ ಸುಮಾರು 5 ಕಿ.ಮೀ ಉದ್ದಕ್ಕೆ ಅಂದರೆ ಎ.ಎಂ.ಆರ್.ಡ್ಯಾಂ ನ ವರೆಗೆ ನೀರು ಸಂಗ್ರಹಿಸುವ ಮೂಲಕ ನೇತ್ರಾವತಿ ನದಿಯ ಇಕ್ಕೆಲಗಳ ಕೃಷಿಕರ ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗುವ ಯೋಜನೆಯಾಗಿದೆ.

    ಜಕ್ರಿಬೆಟ್ಟು ಡ್ಯಾಂ ನಲ್ಲಿ ಒಟ್ಟು 23 ಪಿಲ್ಲರ್ ಗಳಿದ್ದು, 351.25 ಮೀ ಉದ್ದ, 7.5 ಅಗಲದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ಡ್ಯಾಂ ನಲ್ಲಿ ಐದುವರೆ ಮೀ ಎತ್ತರದಲ್ಲಿ ನೀರು ಸಂಗ್ರಹಣೆ ಮಾಡಲಾಗುತ್ತದೆ.
    ಶಾಸಕ ರಾಜೇಶ್ ನಾಯ್ಕ್ ಅವರ ಅವಧಿಯಲ್ಲಿ ನೀಡಿದ ಪ್ರಸ್ತಾವನೆಯಂತೆ ಮಂಜೂರಾದ ಡ್ಯಾಂನ ಕಾಮಗಾರಿಗೆ 2022 ನೇ ಇಸವಿಯ ನವೆಂಬರ್ ತಿಂಗಳಲ್ಲಿ ಮಾಧು ಸ್ವಾಮಿ ಶಿಲಾನ್ಯಾಸ ನೆರವೇರಿಸಿದ್ದರು.

    ನೇತ್ರಾವತಿಯಲ್ಲಿ ವರ್ಷಪೂರ್ತಿ ನೀರು: ಶಾಸಕ ರಾಜೇಶ್ ನಾಯ್ಕ್

    ಜಕ್ರಿಬೆಟ್ಟು ಡ್ಯಾಂ ಮತ್ತು ಬ್ಯಾರೇಜ್ ನಿರ್ಮಾಣದಿಂದ ನೇತ್ರಾವತಿ ನದಿಯಲ್ಲಿ ಮರಳು ಕಾಣದೆ ವರ್ಷಪೂರ್ತಿ ನೀರು ಶೇಖರಣೆಯಾಗುತ್ತದೆ .

    ಬಂಟ್ವಾಳದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆ ಕೃಷಿಕರಿಗೆ ನೀರಿನ ಸಮಸ್ಯೆ ನಿವಾರಣೆಗಾಗಿ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಅಧಿಕಾರಿಗಳು ಇಂದು ಡ್ಯಾಂನಲ್ಲಿ ನೀರು ಶೇಖರಿಸಿ ಸಾಮಾರ್ಥ್ಯ ಪರೀಕ್ಷೆ ನಡೆಸಿದ್ದಾರೆ, ಮುಂದೆ ನೇತ್ರಾವತಿ ನದಿಯಲ್ಲಿನ ನೀರಿನ ಹರಿವನ್ನು ಗಮನಿಸಿಕೊಂಡು ವರ್ಟಿಕಲ್ ಗೇಟ್ ಅಳವಡಿಸಿ‌ನೀರು ಶೇಖರಣೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.


    Share with

    Leave a Reply

    Your email address will not be published. Required fields are marked *