ಬಂಟ್ವಾಳ: ಬಿ.ಸಿ ರೋಡಿನಲ್ಲಿ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ಪದಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಎಂದು ಗುರುತಿಸಲಾಗಿದೆ.
ಎರಡು ವಾರಗಳ ಹಿಂದೆ ಬಿ.ಸಿ ರೋಡಿನ ಹೊಟೇಲ್ ಅನಿಯಾ ದರ್ಬಾರ್ ಹಾಗೂ ಕೆಲವು ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಲಾಗಿತ್ತು, ಈ ಬಗ್ಗೆ ಹೊಟೇಲ್ ಅನಿಯಾ ದರ್ಬಾರ್ ಮಾಲಕ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಮುಸುಕುಧಾರಿ ವ್ಯಕ್ತಿಯೋರ್ವ ಶಟರ್ ಮುರಿಯುವ ಸಹಿತ ಕಳವು ಮಾಡುವ ದೃಶ್ಯಗಳು ಹೊಟೇಲ್ ನ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದರ ಆಧಾರದ ಮೇಲೆ ಆರೋಪಿ ಹಮೀದ್ ಮಂಗಳೂರಿನಿಂದ ಬರುತ್ತಿದ್ದ ವೇಳೆ ಬಂಟ್ವಾಳದಲ್ಲಿ ಕಾರ್ಯಾಚರಣೆ ನಡೆಸಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು, ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳವು ಪ್ರಕರಣ ದಾಖಲಾಗಿದೆ, ಜೊತೆಗೆ ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ವಿವಿಧ ಠಾಣೆಗಳಲ್ಲಿ ವಾರೆಂಟ್ ಕೂಡ ಇರುವ ಬಗ್ಗೆ ಪೋಲಿಸ್ ವಿಚಾರಣೆ ವೇಳೆ ಬಯಲಿಗೆ ಬಂದಿದೆ.
ಈತನನ್ನು ಬಂಟ್ವಾಳ ಡಿ.ವೈಎಸ್.ಪಿ. ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ರಾಮಕೃಷ್ಣ ಮತ್ತು ಕಲೈಮಾರ್ ಅವರ ತಂಡದಲ್ಲಿ ಸಿಬ್ಬಂದಿಗಳಾದ ಇರ್ಷಾದ್. ಪಿ ಮತ್ತು ರಾಜೇಶ್ ಅವರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾದ ಬಂಟ್ವಾಳ ಪೊಲೀಸರು
ಬಿ.ಸಿ.ರೋಡಿನಲ್ಲಿ ನಡೆದ ಎರಡು ಪ್ರತ್ಯೇಕ ಸರಣಿ ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ, ಎರಡು ಪ್ರಕರಣದಲ್ಲಿ ಆರೋಪಿಗಳು ಮುಸುಕುಧಾರಿಗಳಾಗಿ ಬಂದು ಕೃತ್ಯ ನಡೆಸಿದ್ದರು. ಇದೀಗ ಎರಡು ಸರಣಿ ಕಳವು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಕೈಕಂಬ ಪೊಳಲಿ ದ್ವಾರದ ಬಳಿ ನಡೆದ ಸರಣಿ ಕಳವು ಪ್ರಕರಣ ಹಾಗೂ ಬಿ.ಸಿ ರೋಡಿನಲ್ಲಿ ನಡೆದ ಸರಣಿ ಕಳವಿನ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಲ್ಲದೆ, ಅಂಗಡಿಯಿಂದ ವೃದ್ದೆಯೋರ್ವರ ಕುತ್ತಿಗೆಯಿಂದ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.