ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ

Share with

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನ.22ರಂದು ಸಂಜೆ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಸಂಸದ ಹಾಗೂ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಪಕ್ಷದ ನಾನಾ ಘಟಕಗಳ ಪ್ರಮುಖರು ಈ ಸಂದರ್ಭ ನಳಿನ್ ಕುಮಾರ್ ಅವರನ್ನು ಅಭಿನಂದಿಸಿ, ಗೌರವಿಸಿದರು.

ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ.

ಈ ಸಂದರ್ಭ ಮಾತನಾಡಿದ ನಳಿನ್, ಸಂಘಟನಾ ಹಿರಿಯರ ಸೂಚನೆಯತೆ ನಾನು ಚುನಾವಣೆಗೆ ಮೂರು ಬಾರಿ ಸ್ಪರ್ಧಿಸಿದ್ದೇನೆ. ನನಗೆ ಎಲ್ಲ ಹಂತದಲ್ಲಿ ಬೆಳೆಯಲು ಕಾರಣವಾದ ಬಂಟ್ವಾಳವನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಗೌರವಕ್ಕೆ ಚ್ಯುತಿ ಬಾರದಂತೆ ರಾಜಕಾರಣ ಮಾಡ್ತೇನೆ. ನೀವು ತಲೆತಗ್ಗಿಸುವಂತೆ ನಾನು ರಾಜಕೀಯ ಮಾಡಿಲ್ಲ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಯಾರೇ ಚುನಾವಣೆಗೆ ನಿಂತರೂ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಸೀಟುಗಳನ್ನು ಬಿಜೆಪಿ ಗೆಲ್ಲುವಂತೆ ಮಾಡುವುದಷ್ಟೇ ನನ್ನ ಗುರಿ ಎಂದು ನಳಿನ್ ಕುಮಾರ್ ಹೇಳಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿಸಬೇಕು ಎಂಬ ಗುರಿ ನಮ್ಮದಾಗಿರಬೇಕು, ನಳಿನ್ ಮತ್ತು ನನ್ನ ಬಾಂಧವ್ಯ ಚುನಾವಣೆ ಹಾಗೂ ರಾಜಕೀಯಕ್ಕೂ ಮೀರಿದ್ದು, ಪಕ್ಷ ಸಂಘಟನೆಯಲ್ಲಿ ಎಲ್ಲವನ್ನೂ ಎದುರಿಸಿ ಮುನ್ನಡೆಸಿದವರು ಎಂದರು. ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ನಳಿನ್ ಕುಮಾರ್ ಕಟೀಲ್ ಅವರನ್ನು ಅಭಿನಂದಿಸಿ ಮಾತನಾಡಿ ಈ ಅವಧಿಯಲ್ಲಿ 76 ಸಾವಿರ ಕೋಟಿ ದಕ್ಷಿಣ ಕನ್ನಡ ಜಿಲ್ಲೆಗೆ ನಳಿನ್ ಕುಮಾರ್ ಅವರ ಮೂಲಕ ಲಭಿಸಿದೆ ಎಂಬ ಮಾಹಿತಿ ನೀಡಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ ಮಾತನಾಡಿ, ನಳಿನ್ ಕುಮಾರ್ ಅವರು ತನ್ನ ವಿರುದ್ಧ ಟೀಕೆಗಳಿಗೆ ಎದೆಗುಂದದೆ ಮುಂದೆ ಸಾಗಿದವರು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿ ಎಂಬ ಸ್ಪಷ್ಟತೆ ಇರಲಿ ಎಂದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಟ್ರೋಲ್ ಮಾಡುವವರು ಸಮಾಜಕ್ಕೆ ಯಾವ ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ನಾಯಕಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ ಉಪಸ್ಥಿತರಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ವಂದಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.


Share with

Leave a Reply

Your email address will not be published. Required fields are marked *