ಬಂಟ್ವಾಳ: ಮಹಿಳೆಯೋರ್ವಳ ಕುತ್ತಿಗೆಗೆ ಕೈ ಹಾಕಿ ಅಪರಿಚಿತ ವ್ಯಕ್ತಿಗಳಿಬ್ಬರು ಬಂಗಾರದ ಚೈನ್ ಎಳೆದು ಪರಾರಿಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ಡಿ.14ರಂದು ಮಧ್ಯಾಹ್ನ ನಡೆದಿದೆ.
ಬಿ.ಸಿ ರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಇಬ್ಬರು ಕಳ್ಳರು ಬಂಗಾರದ ಚೈನ್ ಎಗರಿಸಿ ಪರಾರಿಯಾಗಿರುವುದು.
ಸುಮಾರು 75 ಸಾವಿರ ಮೌಲ್ಯದ 1.50 ಪವನ್ ನ ಚಿನ್ನದ ಸರ ಕಳವಾಗಿದೆ. ಮಧ್ಯಾಹ್ನ ಸುಮಾರು 2.45 ಗಂಟೆಗೆ ಕಳ್ಳತನ ನಡೆದಿದ್ದು, ಕಳವು ಮಾಡಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದರು ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರು ಇತ್ತೀಚೆಗೆ ಅಂಗಡಿಯನ್ನು ನವೀನ್ ಕುಲಾಲ್ ಎನ್ನುವವರಿಗೆ ಬಾಡಿಗೆಗೆ ನೀಡಿದ್ದರು. ನವೀನ್ ಕುಲಾಲ್ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳುವ ಸಂದರ್ಭದಲ್ಲಿ ಅಂಗಡಿಯಲ್ಲಿ ಮಾಲಕಿ ಸರೋಜಿನಿ ಅವರು ಕುಳಿತು ಕೊಂಡು ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ. ಅದೇ ರೀತಿ ಡಿ.14ರಂದು ನವೀನ್ ಊಟಕ್ಕೆ ತೆರಳಿದಾಗ ಸರೋಜಿನಿ ಅಂಗಡಿಯಲ್ಲಿದ್ದರು.
ಅದೇ ಸಮಯದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿಕೊಂಡಿದ್ದು, ಅದರಲ್ಲಿ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು 40 ರೂಪಾಯಿ ನೀಡಿದರು.
ಇವರ ಎರಡು ವಸ್ತುಗಳ ಬೆಲೆ 3 ಆಗಿದ್ದರಿಂದ ಚಿಲ್ಲರೆ ನೀಡುವ ಉದ್ದೇಶದಿಂದ ಕ್ಯಾಸ್ ಕೌಂಟರ್ ಗೆ ಬಗ್ಗಿದಾಗ ನಿಂತುಕೊಂಡಿದ್ದ ಅಪರಿಚಿತ ವ್ಯಕ್ತಿ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಬಂಗಾರ ಚೈನ್ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾರೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಡಿ.9ರಂದು ಮುಂಜಾನೆ ವೇಳೆ ಕೈಕಂಬ ಎಂಬಲ್ಲಿ ಸುಮಾರು 12 ಸರಣಿ ಅಂಗಡಿಗಳಿಗೆ ನುಗ್ಗಿ ಕಳವು ಮಾಡಿದ ಪ್ರಕರಣ ಮರೆಯಾಗುವ ಮೊದಲೇ ಮತ್ತೆ ಹಗಲು ಹೊತ್ತಿನಲ್ಲಿ ಸ್ನ್ಯಾಚಿಂಗ್ ನಡೆದಿದೆ. ಇದರ ಜೊತೆಗೆ ವಾಹನಗಳ ಕಳವು ಕೂಡ ನಡೆಯುತ್ತಿದ್ದು, ಜನ ಭಯದಿಂದ ವ್ಯಾಪಾರ ನಡೆಸುವ ಕಾಲ ಬಂದಿದೆ. ಬಿ.ಸಿ ರೋಡಿನ ಸುತ್ತಮುತ್ತಲಿನ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳಿದ್ದು ಕಳ್ಳರು ತಮ್ಮ ಚಾಕಚಕ್ಯತೆಯನ್ನು ಉಪಯೋಗಿಸಿ ಕಳ್ಳತನ ಮಾಡುತ್ತಿದ್ದಾರೆ. ಕಳ್ಳರ ಜಾಡನ್ನು ಹಿಡಿಯಲು ಪೋಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.