ಬಂಟ್ವಾಳ: ಹೋಟೆಲ್ ಕಾರ್ಮಿಕನೋರ್ವ ಚೀಟಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಸೋಮನಾಥ ನಿವಾಸಿ ಶೇಖರ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿ ಹೋಟೆಲ್ ಒಂದರಲ್ಲಿ ಕಳೆದ ಐದು ತಿಂಗಳಿನಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ಈತ ಡಿ.4ರಂದು ಸೋಮವಾರ ರಾತ್ರಿ ಕೆಲಸ ಮುಗಿಸಿ, ಬಳಿಕ ಹೋಟೆಲ್ ಮಾಲೀಕರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು.
ಮುಂಜಾನೆ ಬೇಗ ಎದ್ದು ಹೋಟೆಲ್ ನ ಅಡುಗೆ ಕೆಲಸಕ್ಕೆ ಬರುತ್ತಿದ್ದ. ಡಿ.5ರಂದು ಬೆಳಿಗ್ಗೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಕಾರ್ಮಿಕನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಲಿಲ್ಲ. ಇದರಿಂದ ಸಂಶಯಗೊಂಡ ಹೋಟೆಲ್ ಮಾಲೀಕರು ವಿಶ್ರಾಂತಿ ಕೊಠಡಿಗೆ ತೆರಳಿ ನೋಡಿದಾಗ ಮಲಗಿರುವುದು ಕಂಡು ಎಬ್ಬಿಸಿದರು. ಆದರೆ ಆತ ಮಲಗಿರುವ ಪಕ್ಕ ವಿಷದ ಬಾಟಲಿ ಮತ್ತು ಚೀಟಿಯೊಂದಿದ್ದು, ಈತ ವಿಷ ಸೇವಿಸಿರುವ ಬಗ್ಗೆ ಸಂಶಯದಿಂದ ಪೋಲೀಸರಿಗೆ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್.ಐ ರಾಮಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.