ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ವಶಕ್ಕೆ ಪಡೆದ ಘಟನೆ ಜ.25ರಂದು ರಾ.ಹೆ.75ರ ತುಂಬೆಯಲ್ಲಿ ನಡೆದಿದೆ.
ಲಾರಿ ಮಾಲಕ ಸಂತೋಷ್ ಕೋಟ್ಯಾನ್ ಹಾಗೂ ಚಾಲಕ ಪ್ರಕಾಶ್ ಅವರು ಅಕ್ರಮ ಮರಳು ಸಾಗಾಟದ ಆರೋಪಿಗಳು ಎಂದು ತಿಳಿದು ಬಂದಿದೆ
ಗ್ರಾಮಾಂತರ ಪಿಎಸ್‌ಐ ಹರೀಶ್ ಎಂ.ಆರ್ ಹಾಗೂ ತಂಡ ಮುಂಜಾನೆ 5ರ ಸುಮಾರಿಗೆ ಗಸ್ತು ತಿರುಗುತ್ತಿದ್ದ ವೇಳೆ ಲಾರಿಯೊಂದನ್ನು ತಡೆದು ವಿಚಾರಿಸಿದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ. ಸುಮಾರು 4 ಲಕ್ಷ ರೂ. ಮೌಲ್ಯದ ಲಾರಿ ಹಾಗೂ 7 ಸಾವಿರ ರೂ. ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.