ಬಂಟ್ವಾಳ: ಸಿ.ಸಿ ಕ್ಯಾಮರಾ ಇದ್ದರೂ ಕೂಡ ಅದಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು, ಸುಮಾರು 70 ಸಾವಿರಕ್ಕೂ ಅಧಿಕ ಮೌಲ್ಯದ ನಗದು ಹಣವನ್ನು ಎಗರಿಸಿದ ಘಟನೆ ಬಿ.ಸಿ ರೋಡಿನ ಪೊಲೀಸ್ ಸ್ಟೇಶನ್ ನ ಕೂಗಳತೆ ದೂರದಲ್ಲೇ ಇರುವ ಹೋಟೆಲ್ ನಲ್ಲಿ ನಡೆದಿದೆ.
ಸರಕಳ್ಳತನವನ್ನು ಯಶಸ್ವಿಯಾಗಿ ಬಗೆಹರಿಸಿದ ಪೊಲೀಸರು ನಿಟ್ಟುಸಿರು ಬಿಡುವಾಗಲೇ ಇನ್ನೊಂದು ಕಳವು ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಬಿ.ಸಿ ರೋಡ್ ನ ಕೈಕಂಬ ಜಂಕ್ಷನ್ ನಲ್ಲಿ ಕಳ್ಳರು ಹಲವು ಅಂಗಡಿಗಳಿಗೆ ನುಗ್ಗಿ ಸರಣಿ ಕಳವು ನಡೆದ ಘಟನೆ ಹಸಿರಾಗಿರುವಂತೆಯೇ ಮಧ್ಯರಾತ್ರಿ ಬಿ.ಸಿ.ರೋಡ್ ನಲ್ಲಿರುವ ಮುಖ್ಯ ಪೇಟೆಯಲ್ಲೇ ಕಳವು ಪ್ರಕರಣ ನಡೆದಿದ್ದು, ಹೋಟೆಲ್, ಮೆಡಿಕಲ್ ಸೇರಿ ಹಲವೆಡೆ ಸರಣಿ ಕಳವು ನಡೆಸಿ ಪರಾರಿಯಾಗಿದ್ದಾರೆ.
ರಸ್ತೆ ಬದಿಯೇ ಇರುವ ಹೋಟೆಲಿನ ಎರಡೆರಡು ಶಟರ್ ಬೇಧಿಸಿದ ಕಳ್ಳರು, ಕ್ಯಾಶ್ ಡ್ರಾಯರ್ ನಲ್ಲಿದ್ದ 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ. ಮುಸುಕುಧಾರಿಯಾಗಿರುವ ಕಳ್ಳನೋರ್ವ ಹೋಟೆಲಿನ ಗೇಟಿನ ಬೀಗವನ್ನು ಬಲವಂತವಾಗಿ ತೆಗಯುವ ದೃಶ್ಯವೊಂದೇ ಸಿ.ಸಿ ಟಿವಿಯಲ್ಲಿ ದೊರಕಿದ್ದು, ಉಳಿದಂತೆ ಒಳಪ್ರವೇಶಿಸುವ ಹಂತದಲ್ಲಿ ಸಿ.ಸಿ ಕ್ಯಾಮರಾಕ್ಕೂ ಕವಚ ಹಾಕಿ ನುಗ್ಗಿದ್ದಾನೆ. ಹೋಟೆಲ್ ನ ಇನ್ನೊಂದು ಪಕ್ಕದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಸಹಿತ ಕೆಲವೆಡೆಯೂ ಕಳ್ಳರು ಕೈಚಳಕ ತೋರಿದ್ದಾರೆ.