BCCI Awards: ಗಿಲ್ ವರ್ಷದ ಕ್ರಿಕೆಟಿಗ; ದ್ರಾವಿಡ್, ಮಿಥಾಲಿಗೆ  ಜೀವಮಾನ ಸಾಧನೆ ಪ್ರಶಸ್ತಿ

Share with

2023 ರಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದಿದ್ದ ಟೀಂ ಇಂಡಿಯಾ ಬಿಸಿಸಿಐನಿಂದ (BCCI) 125 ಕೋಟಿ ರೂ. ಬಹುಮಾನ ಪಡೆಯುವುದರ ಜೊತೆಗೆ ಮುಂಬೈನಲ್ಲಿ ವಿಕ್ಟರಿ ಪೆರೇಡ್‌ ಮಾಡಿತ್ತು. ಈ ಬಾರಿಯೂ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ.ಆದರೆ ವಿಕ್ಟರಿ ಪೆರೇಡ್‌ ಮಾಡಲು ಅವಕಾಶ ಸಿಕ್ಕಿಲ್ಲ. ಹಾಗೆಯೇ ಆಟಗಾರರನ್ನು ಬಿಸಿಸಿಐನಿಂದ ಸನ್ಮಾನಿಸಲಾಗಿಲ್ಲ. ಇದೀಗ ಅದಕ್ಕೆ ವೇದಿಕೆ ಸಜ್ಜಾಗಿದ್ದು, ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಂಪಿಯನ್ ತಂಡವನ್ನು ಗೌರವಿಸಲಿದೆ. ಹಾಗೆಯೇ ಈ ಪ್ರಶಸ್ತಿ ಸಮಾರಂಭದಲ್ಲಿ ವರ್ಷದ ಕ್ರಿಕೆಟಿಗ, ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಈ ಇತರ ಪ್ರಶಸ್ತಿಗಳಿಗೆ ಭಾಜನರಾಗಿರುವ ಆಟಗಾರರನ್ನು ಗೌರವಿಸಲಾಗುತ್ತದೆ.

ಗಿಲ್ ವರ್ಷದ ಅತ್ಯುತ್ತಮ ಕ್ರಿಕೆಟಿಗ
ಅದರಂತೆ ಈ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಸ್ಮರಣೀಯ ಪ್ರದರ್ಶನ ನೀಡಿದ ಗಿಲ್ಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಲಾಗುವುದು. ನಾಯಕನಾದ ನಂತರ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಚೊಚ್ಚಲ ಸರಣಿಯಲ್ಲಿ ನಾಲ್ಕು ಶತಕಗಳು ಸೇರಿದಂತೆ ದಾಖಲೆಯ 754 ರನ್ ಕಲೆಹಾಕಿದ್ದರು. ಹಾಗೆಯೇ ಏಕದಿನ ತಂಡದ ನಾಯಕನಾಗಿ ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಆದಾಗ್ಯೂ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಗಿಲ್ ಪ್ರದರ್ಶನ ವಿಶೇಷವಾಗಿರಲಿಲ್ಲ. ಆದರೆ ಉಳಿದೆರಡು ಸ್ವರೂಪಗಳಲ್ಲಿ ಮಿಂಚಿದ್ದ ಗಿಲ್, ಕಳೆದ ಅವರು ಮೂರು ಸ್ವರೂಪಗಳಲ್ಲಿ 42 ಇನ್ನಿಂಗ್ಸ್‌ಗಳಲ್ಲಿ 49 ಸರಾಸರಿಯಲ್ಲಿ ಒಟ್ಟು 1764 ರನ್ ಬಾರಿಸಿದ್ದರು. ಇದರಲ್ಲಿ ಏಳು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿದ್ದವು.

ದ್ರಾವಿಡ್ ಹಾಗೂ ಮಿಥಾಲಿ ರಾಜ್ಗೆ ಜೀವಮಾನ ಸಾಧನೆ ಪ್ರಶಸ್ತಿ
ಭಾರತದ ಮಾಜಿ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ವಿಶ್ವ ಕ್ರಿಕೆಟ್ನ ಅಗ್ರಗಣ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಾಹುಲ್ ದ್ರಾವಿಡ್, ತರಬೇತುದಾರರಾಗಿಯೂ ಭಾರತ ಕ್ರಿಕೆಟ್ಗೆ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ. ದ್ರಾವಿಡ್ ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ಇತರ ಪ್ರಶಸ್ತಿಗಳ ಪಟ್ಟಿ
ದ್ರಾವಿಡ್ ಜೊತೆಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ದೇಶೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್-ರೌಂಡರ್‌ಗಾಗಿ ನೀಡುವ ಲಾಲಾ ಅಮರನಾಥ್ ಪ್ರಶಸ್ತಿಗೆ ಮುಂಬೈನ ಆಯುಷ್ ಮ್ಹಾತ್ರೆ ಭಾಜನರಾಗಿದ್ದಾರೆ. ಹಾಗೆಯೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅನ್ನು ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಂಘವೆಂದು ಗೌರವಿಸಲಾಗುವುದು.

ಈ ಸಮಾರಂಭಕ್ಕೆ 2026 ರ ಟಿ20 ವಿಶ್ವಕಪ್ ವಿಜೇತರ ಜೊತೆಗೆ, 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡವನ್ನು ಸಹ ಆಹ್ವಾನಿಸಲಾಗುವುದು. ಹಿರಿಯ ಮಹಿಳಾ ತಂಡ ಮತ್ತು 2025 ರಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಅಂಡರ್ -19 ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಸಹ ಆಹ್ವಾನಿಸಲಾಗುವುದು.


Share with

Leave a Reply

Your email address will not be published. Required fields are marked *