ಮುಳುಗು ತಜ್ಞ ದಿನೇಶ್ ಖಾರ್ವಿ ತಂಡದಿಂದ ತೀವ್ರ ಶೋಧ
ಉಡುಪಿ: ಮೂರು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಬೀಜಾಡಿ ಬಳಿ ಸಮುದ್ರದಲೆಯ ಅಬ್ಬರಕ್ಕೆ ಕೊಚ್ಚಿಹೋಗಿ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಸ್ನೇಹಿತರ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯೋಗೀಶ್ (22) ಎಂಬಾತನೆ ಸಮುದ್ರ ಪಾಲಾಗಿದ್ದ ಯುವಕ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಯೋಗೀಶ್ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನೀರು ಪಾಲಾಗಿದ್ದನು. ಮಳೆಗಾಲದ ಸಮುದ್ರದ ಅಬ್ಬರದ ಕುರಿತು ಮಾಹಿತಿ ಇಲ್ಲದೆ ನೀರಿಗೆ ಇಳಿದಿದ್ದ ಆತ, ಸಮುದ್ರದಲ್ಲಿ ಗಾಳಿಯ ಒತ್ತಡ ಮತ್ತು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದನು. ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಸ್ಥಳೀಯರ ತಂಡ ಹುಡುಕಾಟ ನಡೆಸುತ್ತಿದೆ. ಸಮುದ್ರದ ಒತ್ತಡಕ್ಕೆ ದೇಹವು ಬೈಂದೂರು ಅಥವಾ ಭಟ್ಕಳದತ್ತ ತೇಲಿ ಹೋಗಿರುವ ಸಾಧ್ಯತೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.