ಬೆಂಗಳೂರು: ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಸಕಾಲಿಕ ಮುನ್ನೆಚ್ಚರಿಕೆ ನೀಡಲು ಮುಂದಾಗಿದ್ದು, ಅದರಿಂದ ರಾಜ್ಯದಲ್ಲಿ ಅ.12ರಂದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆಯು ನಡೆಯಲಿದೆ.
ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಮೊಬೈಲ್ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ದದೊಂದಿಗೆ ಸಂದೇಶ ಫ್ಲಾಶ್ ಆಗಲಿದೆ. ಬಳಕೆದಾರರು ಸರಿ ಎಂದು ಒತ್ತುವವರೆಗೂ ಈ ಬೀಪ್ ಬರುತ್ತಲೇ ಇರುತ್ತದೆ. ಇದು ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷೆ ನಡೆಯಲಿದೆ.
ಭೂಕಂಪ, ಸುನಾಮಿ, ಅಗ್ನಿ ದುರಂತ ಮತ್ತು ಹಠಾತ್ ಪ್ರವಾಹ, ಯುದ್ಧಗಳಂತಹ ವಿಪತ್ತುಗಳ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರವನ್ನು ಸನ್ನದ್ಧರಾಗಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವ್ಯವಸ್ಥೆ ಸಹಕಾರ ನೀಡಲಿದೆ. ಮುಂದಿನ ದಿನದಲ್ಲಿ ವಿಕೋಪಗಳು ಸಂಭವಿಸಬಹುದಾದ ಸ್ಥಳಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಈ ಫ್ಲಾಶ್ ಸಂದೇಶದ ಮೂಲಕ ಎಚ್ಚರಿಸಲಾಗುತ್ತದೆ.