ಪುತ್ತೂರು: ಭಾರತೀಯ ಕುಸ್ತಿ ಸಂಘದ(ರಿ.) ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಸಂಜಯ್ ಕುಮಾರ್ ಸಿಂಗ್, ಹಿರಿಯ ಉಪಾಧ್ಯಕ್ಷರಾಗಿ ದೇವೇಂದರ್, ಉಪಾಧ್ಯಕ್ಷರುಗಳಾಗಿ ಅಸಿತ್ ಕುಮಾರ್ ಸಹ, ಜಯಪ್ರಕಾಶ್, ಕಾರ್‍ತರ್ ಸಿಂಗ್, ಎನ್.ಫೋನಿ, ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಲೊಚಬ್, ಕೋಶಾಧಿಕಾರಿ ಸತ್ಯಪಾಲ್ ಸಿಂಗ್ ದೇಶ್‌ವಾಲ್, ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಆರ್.ಕೆ.ಪುರುಶೋತ್ತಮ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಮ್.ಲೋಗನಾಥನ್, ನೈವಿಕೌಲಿ ಖಾತ್ಸು, ಪ್ರಶಾಂತ್ ರೈ, ರಜನೀಶ್ ಕುಮಾರ್, ಉಮ್ಮೆದ್ ಸಿಂಗ್ ಆಯ್ಕೆಯಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಫುಲ್ಲ ವಿ.ಶೆಟ್ಟಿ ದಂಪತಿ ಸುಪುತ್ರ ಹಾಗೂ ಡಾ.ಸಾಯಿ ರಮೇಶ್ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಯವರ ಸಹೋದರ ಬಿ.ಗುಣರಂಜನ್ ಶೆಟ್ಟಿ ಮೂಲತಃ ಪುತ್ತೂರಿನ ಬೆಳ್ಳಿಪ್ಪಾಡಿ ಮನೆತನದಲ್ಲಿ ಜನಿಸಿ, ಉರಮಾಲು ಗುತ್ತು ನಿವಾಸಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಬಿ. ಗುಣರಂಜನ್ ಶೆಟ್ಟಿಯವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.
ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಬೆಂಗಳೂರು, ಐ ಕ್ಯಾರ್ ಬ್ರಿಗೇಡ್, ಐ ಕ್ಯಾರ್ ಫೌಂಡೇಶನ್, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರೂ ಆಗಿರುತ್ತಾರೆ.
ಇತ್ತೀಚೆಗೆ ನಡೆದ ದೇಶದಲ್ಲೇ ಪ್ರಖ್ಯಾತಿ ಪಡೆದ ಬೆಂಗಳೂರು ಕಂಬಳದ ಆಯೋಜನೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಕರಾವಳಿ ಹಾಗೂ ಬೆಂಗಳೂರಿನ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.