ಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪ್ಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಡ ಬೆಟ್ಟು- ಹಲಕ್ಕೆ ಎಂಬಲ್ಲಿರುವ ಕಿರು ಸೇತುವೆ ಕುಸಿಯಲು ಸಿದ್ಧವಾಗಿದೆ.
ಉಜಿರೆಯಿಂದ ಬರುವ ಎರ್ನೋಡಿ ಹಳ್ಳ ನೇತ್ರಾವತಿ ನದಿಯನ್ನು ಸೇರುವ ಒಂದು ಕಿಮೀ ದೂರದಲ್ಲಿ ಇರುವ ಈ ಕಿರು ಸೇತುವೆ ಗುರಿಪ್ಪ ಳ್ಳ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕವಾಗಿದೆ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಿರು ಸೇತುವೆ 8ಮೀ. ಉದ್ದ 1.5ಮೀ. ಅಗಲವಿದ್ದು ಕೇವಲ ಒಂದು ವಾಹನ ಸಂಚರಿಸುವಷ್ಟು ವ್ಯಾಪ್ತಿ ಹೊಂದಿದೆ. ಹಳ್ಳದಿಂದ ಸುಮಾರು 12 ಅಡಿ ಎತ್ತರದಲ್ಲಿ ಇರುವ ಈ ಸೇತುವೆಯನ್ನು ಸ್ಲಾಬ್ ಹಾಕಿ ನಿರ್ಮಿಸಲಾಗಿದೆ.
ಸೇತುವೆ ಎರಡು ಬದಿ ಹಾಗೂ ಬುಡ ಭಾಗವನ್ನು ಕಲ್ಲುಗಳಿಂದ ಕಟ್ಟಲಾಗಿದ್ದು ಇದೀಗ ಕಲ್ಲಿನ ಗೋಡೆ ಸಂಪೂರ್ಣ ಬಿರುಕು ಬಿಟ್ಟಿದೆ. ಸ್ಲಾಬ್ ನಲ್ಲೂ ಕೂಡ ಸಾಕಷ್ಟು ಬಿರುಕುಗಳು ಮೂಡಿ ಕುಸಿಯುವ ಸಾಧ್ಯತೆ ಇದೆ. ಮಳೆ ನೀರು ಸೇತುವೆ ಮೂಲಕವೇ ಹರಿಯುವ ಕಾರಣದಿಂದ ಕಣಿವೆ ನಿರ್ಮಾಣವಾಗಿ, ತೀರಾ ಶಿಥಿಲಾವಸ್ಥೆ ತಲುಪಿರುವ ಈ ಕಿರು ಸೇತುವೆ ಯಾವಾಗ ಬೇಕಾದರೂ ಕುಸಿದು ಬೀಳುವ ಹಂತವನ್ನು ತಲುಪಿದೆ.
-ಹಲವೆಡೆ ಸಂಪರ್ಕ-
ಈ ಕಿರು ಸೇತುವೆ ಗುರಿಪ್ಪಳ್ಳ, ಇಂದಬೆಟ್ಟು, ಕೊಲ್ಲಿ, ಬಂಗಾಡಿ, ಕಿಲ್ಲೂರು ಮೊದಲಾದ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಪ್ರದೇಶಗಳಿಗೆ ತೆರಳಲು ಇದು ಹತ್ತಿರದ ದಾರಿಯಾಗಿದ್ದು ಸಾವಿರಾರು ಮನೆಗಳ, ನೂರಾರು ವಾಹನಗಳು ಈ ಸೇತುವೆ ಮೂಲಕ ಸಂಚರಿಸುತ್ತವೆ. ಕೆ.ಎಸ್.ಆರ್.ಟಿ.ಸಿ ಬಸ್ ಗಳು, ಶಾಲಾ ಬಸ್, ಬಾಡಿಗೆ ವಾಹನಗಳು ಕೂಡ ಪ್ರತಿದಿನ ಸಂಚಾರ ನಡೆಸುತ್ತವೆ. ಇತ್ತೀಚಿನ ದಿನಗಳಲ್ಲಿ ಬಸ್ ಗಳಲ್ಲಿ ಮಿತಿಗಿಂತ ಅಧಿಕ ಪ್ರಯಾಣಿಕರು ಇರುವ ಕಾರಣ ಈ ಸೇತುವೆಯಲ್ಲಿ ಬಸ್ ಸಂಚರಿಸುವಾಗ ಭಯದ ವಾತಾವರಣ ಉಂಟಾಗುತ್ತದೆ.
-ತಡೆ ಬೇಲಿಯೇ ಇಲ್ಲ-
ಕೇವಲ ಒಂದು ವಾಹನ ಸಂಚರಿಸುವಷ್ಟು ವ್ಯಾಪ್ತಿ ಹೊಂದಿರುವ ಈ ಕಿರು ಸೇತುವೆ ಎರಡು ಬದಿಯ ತಡೆ ಬೇಲಿ ಕುಸಿದು ಹಲವು ವರ್ಷಗಳ ಸಂದಿವೆ. ತಡಬೇಲಿ ಇಲ್ಲದ ಸೇತುವೆಯ ಪ್ರದೇಶ ತಿರುವಿನಿಂದ ಕೂಡಿದ್ದು ಅತ್ಯಂತ ಅಪಾಯಕಾರಿಯಾಗಿದೆ. ಇದರಲ್ಲಿ ಸಂಚಾರ ನಡೆಸುವುದು ದುಸ್ತರವಾಗಿದೆ. ಒಂದೊಮ್ಮೆ ಈ ಸೇತುವೆ ಕುಸಿದರೆ ಸಾವಿರಾರು ಮನೆಗಳ ಸಂಪರ್ಕ ಕಡಿತಗೊಳ್ಳಲಿದೆ ಅಲ್ಲದೆ ಶಾಲಾ ಮಕ್ಕಳು, ಉದ್ಯೋಗಿಗಳು ಅತಿ ಹೆಚ್ಚು ದೂರ ಇರುವ ಸುತ್ತು ಬಳಸಿನ ರಸ್ತೆ ಮೂಲಕ ಸಂಚರಿಸಿ ಉಜಿರೆ ತಲುಪುವ ಸ್ಥಿತಿ ಉಂಟಾಗಲಿದೆ.
-ಫಲಕ ಅಳವಡಿಕೆ-
ಸೇತುವೆ ಪರಿಸ್ಥಿತಿ ಅವಲೋಕನ ನಡೆಸಿದ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಸೇತುವೆಯ ಇಕ್ಕೆಲಗಳಲ್ಲೂ ‘ಸೇತುವೆಯು ಹಳೆಯದಾಗಿದ್ದು, ದುರ್ಬಲಾವಸ್ತೆಯಲ್ಲಿರುತ್ತದೆ. ಸಾರ್ವಜನಿಕರು ಜಾಗರೂಕರಾಗಿ ನಿಧಾನವಾಗಿ ಚಲಿಸಬೇಕಾಗಿ ವಿನಂತಿಸಿದೆ ಎಂಬ ಫಲಕವನ್ನು ಅಳವಡಿಸಿದೆ. ತಡೆ ಬೇಲಿ ಜಾಗಕ್ಕೆ ಪ್ಲಾಸ್ಟಿಕ್ ಟೇಪ್ ಕಟ್ಟಲಾಗಿದೆ!