ಬೆಳ್ತಂಗಡಿ: ಕುತ್ಲೂರು ಸರಕಾರಿ ಶಾಲೆಯ ಅಭಿವೃದ್ಧಿ ನೋಡಿ ಅತ್ಯಂತ ಹೆಚ್ಚು ಖುಷಿ ಪಟ್ಟಿರುವುದಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ತಿಳಿಸಿದ್ದಾರೆ. ಅವರು ಡಿ.2ರಂದು ಬೆಳ್ತಂಗಡಿ ತಾಲೂಕಿನ ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡುತ್ತಿದ್ದರು.
ಊರಿನ ಜನ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿದಾಗ ಸಾಮೂಹಿಕ ಪ್ರಯತ್ನದಿಂದ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ನಾನು ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿ. ನನ್ನ ಊರಿಗೆ ಸರಕಾರಿ ಶಾಲೆ ಆಗಬೇಕೆಂಬ ಇಚ್ಛೆಯಿಂದ ಜನಪ್ರತಿನಿಧಿಗಳು, ಮಾಧ್ಯಮಗಳು ಸೇರಿದಂತೆ ಶಿಕ್ಷಣದ ಆಸಕ್ತಿ ಹೊಂದಿರುವ ಜನರ ಸಹಕಾರದಿಂದ ನನ್ನ ಆಸೆ ಈಡೇರಿದೆ. ಅದೇ ರೀತಿ ಕುತ್ಲೂರಿನಲ್ಲಿಯೂ ಎಲ್ಲ ಜನರ ಸಹಕಾರದಿಂದ ಶಾಲಾ ತೋಟ, ಸಂಸ್ಥೆ ಬೆಳೆದು ಬಂದಿರುವುದು ನೋಡಿದಾಗ ಅತ್ಯಂತ ಹೆಚ್ಚು ಸಂತೋಷವಾಯಿತು ಎಂದು ಹಾಜಬ್ಬ ವಿವರಿಸಿದರು.
ಶಾಲಾ ತೋಟದ ಉದ್ಘಾಟನೆ ಸಮಾರಂಭದಲ್ಲಿ ನಾರಾವಿ ಅಧ್ಯಕ್ಷ ರಾಜ ವರ್ಮ ಜೈನ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳದ ಧರ್ಮೋಥ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವೀರು ಶೆಟ್ಟಿ, ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯಕ ಯೋಜನಾಧಿಕಾರಿ ಆನಂದ ಸುವರ್ಣ, ಇತರ ಅತಿಥಿಗಳಾದ ಜೀವಂಧರ ಕುಮಾರ್, ಸತೀಶ್ ಪಡಿವಾಳ್, ಕೃಷ್ಣ ಪ್ಪ ಪೂಜಾರಿ,ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಮುಖ್ಯೋಪಾಧ್ಯಾಯರಾದ ರೂಪ ಕುಮಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿ ಕಾರಿ ಪುಷ್ಪ ರಾಜ್ ಬಿ.ಎನ್, ಉಪಾಧ್ಯಕ್ಷ ಭಾಸ್ಕರ ರೈ ಕೆ, ಪತ್ರಕರ್ತ ಧನಕೀರ್ತಿ ಅರಿಗ, ಎಸ್ ಡಿಎಂಸಿ ಉಪಾಧ್ಯಕ್ಷ ರಾದ ಜ್ಯೋತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಉಪಸ್ಥಿತರಿದ್ದರು.
ಎಸ್ ಡಿಎಂ ಸಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು. ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.