ಬೆಳ್ತಂಗಡಿ: ಬೆಳ್ತಂಗಡಿ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಿಡಿಗೇಡಿಗಳು ವಿಷವಿಕ್ಕಿದ ಪರಿಣಾಮ ಸಾಕು ನಾಯಿಗಳು ಸೇರಿದಂತೆ 10ಕ್ಕಿಂತ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಮಾ.30 ರಂದು ರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಆಹಾರದಲ್ಲಿ ವಿಷ ಬೆರೆಸಿ ಎಸೆದು ಹೋಗಿದ್ದಾರೆ. ಆಹಾರವನ್ನು ಸೇವಿಸಿರುವ 10ಕ್ಕೂ ಅಧಿಕ ಸಾಕು ನಾಯಿಗಳು ಹಾಗೂ ಬೀದಿ ಬದಿ ನಾಯಿಗಳು ಸಾವನ್ನಪ್ಪಿವೆ.
ತಡರಾತ್ರಿ ಈಸ್ಟರ್ ಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ, ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರಿಗೆ ಮಾಹಿತಿಯನ್ನು ನೀಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೆಲ ಮನೆಗಳ ಅಂಗಳದಲ್ಲಿ ಕೂಡ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸಾವನ್ನಪ್ಪಿದ ನಾಯಿಗಳನ್ನು ಪಂಚಾಯತ್ ವತಿಯಿಂದ ಹೂಳುವ ವ್ಯವಸ್ಥೆ ಮಾಡಲಾಯಿತು.