ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಬೆಂಗಳೂರು ಬಂದ್ ಸೆ.26ರಂದು ಬೆಳಿಗ್ಗೆ 6 ಗಂಟೆಗೆ ಶುರುವಾಗಿದ್ದು ಸಂಜೆ 6ರ ತನಕ ಬಂದ್ ನಡೆಯಲಿದೆ.
ಅಗತ್ಯ ಸೇವೆಗಳು ಆರಂಭಗೊಂಡಿದ್ದು, ಕೆಲವರು ಬೆಂಗಳೂರು ಬಂದ್ಗೆ ನೈತಿಕ ಬೆಂಬಲ ಘೋಷಿಸಿ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಅಹಿತಕರ ಘಟನೆ ಸಂಭವಿಸದಂತೆ ಬೆಂಗಳೂರು ನಗರಾದ್ಯಂತ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಂಡಿದೆ. ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಯಲಿದ್ದು ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ. ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ್ದು, ಹಲವು ಸಾರ್ವಜನಿಕ ವಾಹನಗಳ ಸಂಘಟನೆಗಳೂ ಬೆಂಬಲವನ್ನು ಸೂಚಿಸಿವೆ.
ಬೆಂಗಳೂರಿನಲ್ಲಿ ಶಾಲಾ ವಾಹನ ಒಕ್ಕೂಟದವರು ಮತ್ತು ಆಟೋ ರಿಕ್ಷಾ ಸಂಘಟನೆಗಳು ಬೆಂಬಲ ಸೂಚಿಸಿವೆ. ಓಲಾ, ಉಬರ್ ಸಂಸ್ಥೆಗಳು ನೈತಿಕ ಬೆಂಬಲವನ್ನು ನೀಡಿದ್ದು, ಸೇವೆಯನ್ನು ನೀಡಲಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಪರಿಸ್ಥಿತಿ ನೋಡಿಕೊಂಡು ರಸ್ತೆಗೆ ಇಳಿಯಲಿದ್ದು, ಮೆಟ್ರೋ ಸಂಚರಿಸಲಿದೆ.