ಬೆಂಗಳೂರು: ಸರ್ಕಾರದ ವಿರುದ್ಧ ಸೆ.11ರಂದು ಬೆಂಗಳೂರು ಬಂದ್‌ಗೆ 32 ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ನೀಡಿವೆ. ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಸಾರಿಗೆಯು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸದ ಕಾರಣ ಸರ್ಕಾರ ವಿರುದ್ದ ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್‌ಗೆ ಕರೆ ನೀಡಿದೆ.
ಖಾಸಗಿ ಸಾರಿಗೆಯ ವಿವಿಧ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಸಾರಿರುವ ಬೆಂಗಳೂರು ಬಂದ್‌ಗೆ ಓಲಾ ಮತ್ತು ಊಬರ್ ಚಾಲಕರು ಹಾಗೂ ಖಾಸಗಿ ಸಾರಿಗೆ ಮಾಲೀಕರ ಸಂಘದವರು ಬೆಂಬಲವನ್ನು ಸೂಚಿಸಿದ್ದಾರೆ.
ಆದರಿಂದ ಸೆ.11ರಂದು ಆಟೋ, ಟ್ಯಾಕ್ಸಿ, ಓಲಾ, ಊಬರ್ ಓಡಾಟ ಇರುವುದಿಲ್ಲ. ಭಾನುವಾರ ರಾತ್ರಿ 12 ಗಂಟೆಯಿಂದಲೇ ಸೇವೆ ಸ್ಥಗಿತವಾಗಲಿದೆ ಮತ್ತು ಈ ಪ್ರತಿಭಟನೆಗೆ ಖಾಸಗಿ ಬಸ್ ಮಾಲೀಕರು ಸಾಥ್ ನೀಡಲಿದ್ದಾರೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ತಿಳಿಸಿದ್ದಾರೆ.