ಬೆಂಗಳೂರು, ಅ.23: ಬೆಂಗಳೂರಿನ ರಸ್ತೆ ಗುಂಡಿಗಳ (Bangalore potholes) ಬಗ್ಗೆ ದಿನಕ್ಕೊಂದು ಟ್ರೋಲ್, ಪೋಸ್ಟ್ಗಳನ್ನು ಹಾಕಿ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಎಲ್ಲ ಪ್ರಯತ್ನಗಳು ನಡೆಯಿತು. ಉದ್ಯಮಿಗಳು, ಹಾಗೂ ವಿದೇಶಿಗರು ಕೂಡ ಈ ಬಗ್ಗೆ ಪೋಸ್ಟ್ ಹಾಕಿ ಸಿದ್ಧರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದು ಆಯಿತು. ಸರ್ಕಾರ ಮತ್ತು ಅಧಿಕಾರಿಗಳು ಈ ಯಾವುದಕ್ಕೂ ಕೇರ್ ಎಂದಿಲ್ಲ. ಕೊನೆಗೆ ಜನರೇ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಇನ್ನು ಕೆಲವರು ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಇಲ್ಲೊಂದು ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಸ್ತೆ ಮಧ್ಯೆ ಆಗಿರುವ ದೊಡ್ಡ ಗುಂಡಿಗೆ ಹೂ ಹಾಕಿ, ದೀಪ ಇಟ್ಟು ಪೂಜೆ ಮಾಡಿದ್ದಾರೆ. ಈ ವಿಡಿಯೋಗೆ ಹೀಗೆ ಶೀರ್ಷಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿ ಪೂಜೆ! ಸಿಂಗಾಪುರ ಮತ್ತು ಲಂಡನ್‌ನಂತಹ ರಸ್ತೆಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ ನಾಯಕರ ಸುಂದರ ಫ್ಲೆಕ್ಸ್‌ಗಳನ್ನು ತಂದು ಹೂವುಗಳನ್ನು ಅರ್ಪಿಸುವ ಸಮಯ ಎಂದು ಬರೆದುಕೊಂಡಿದ್ದಾರೆ.





