ಬೆಂಗಳೂರು, ಫೆ.4: ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ ಬಗ್ಗೆ ದಿನದಿಂದ ದಿನಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಬೆಂಗಳೂರಿನ ಟೆಕ್ ಉದ್ಯಮದಲ್ಲಿ 2025ರ ಕೊನೆಯ ಅವಧಿಯಲ್ಲಿ ಉಂಟಾದ ಉದ್ಯೋಗ ಕಡಿತ (Layoffs) ಮತ್ತು ಯುವ ವೃತ್ತಿಪರರ ಮಾನಸಿಕ ಸಂಘರ್ಷದ ಬಗ್ಗೆ ಬೆಂಗಳೂರಿನ ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್ನಲ್ಲಿ ಒಂದು ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 25 ಎಂದರೆ ಎಲ್ಲೆಡೆ ಸಂಭ್ರಮ, ರಜೆಯ ಮೋಜು. ಆದರೆ ಬೆಂಗಳೂರಿನ ಸಾವಿರಾರು ಯುವ ಟೆಕ್ಕಿಗಳಿಗೆ 2025ರ ಕ್ರಿಸ್‌ಮಸ್ ತಂದದ್ದು ಕೇವಲ ಆತಂಕ ಮತ್ತು ಅನಿಶ್ಚಿತತೆ. ಕೆಲಸ ಕಳೆದುಕೊಂಡ ನೋವು ಮತ್ತು ಭವಿಷ್ಯದ ಭಯ ಅವರ ಹಬ್ಬದ ಖುಷಿಯನ್ನು ನುಂಗಿ ಹಾಕಿತ್ತು.
26 ವರ್ಷದ ಯುವ ಡೇಟಾ ಇಂಜಿನಿಯರ್ ಒಬ್ಬರು ರೆಡ್ಡಿಟ್ನಲ್ಲಿ (Reddit) ಹಂಚಿಕೊಂಡ ಕಥೆ ಇಡೀ ಉದ್ಯಮದ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರನ್ನು ಡಿಸೆಂಬರ್ 15 ರಂದು ಹಠಾತ್ತನೆ ಕೆಲಸದಿಂದ ತೆಗೆದುಹಾಕಲಾಯಿತು. ಲೇಆಫ್ ಆದ ಮೇಲೆ ದಿನಕ್ಕೆ 5-6 ಗಂಟೆ ಹೊಸ ಸ್ಕಿಲ್ ಕಲಿಯುವುದು, 3-4 ಗಂಟೆ ಕೆಲಸ ಹುಡುಕುವುದು ನನ್ನ ದಿನಚರಿಯಾಯಿತು. ಕೊನೆಗೂ ಅಮೆಜಾನ್‌ನಂತಹ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ, ಇದರಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 10 ದಿನಗಳು ಕಳೆದರೂ ಒಂದೇ ಒಂದು ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಯಾಕೆಂದರೆ ಮತ್ತೆ ಕೆಲಸ ಕಳೆದುಕೊಂಡರೆ ಎಂಬ ಭಯ.
ಡಿಸೆಂಬರ್ 10 ರವರೆಗೆ 257 ಟೆಕ್ ಕಂಪನಿಗಳಿಂದ ಸುಮಾರು 1,22,549 ಉದ್ಯೋಗಿಗಳನ್ನು ಹೊರಹಾಕಲಾಗಿದೆ.ಜನವರಿ ತಿಂಗಳೊಂದರಲ್ಲೇ 27 ಕಂಪನಿಗಳಿಂದ 24,818 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಜನ ಹಲವು ರೀತಿಯಲ್ಲಿ ಸಲಹೆ ನೀಡಿದ್ದಾರೆ. ಒಬ್ಬ ರೆಡಿಟ್ ನೆಟ್ಟಿಗರೊಬ್ಬರು 776 ಕಂಪನಿಗಳಿಗೆ ಅರ್ಜಿ ಹಾಕಿ, 100 ದಿನಗಳ ಸತತ ಪ್ರಯತ್ನದ ನಂತರ ಕೆಲಸ ಪಡೆದಿದ್ದೇನೆ ಎಂದು ಹೇಳಿದ್ದಾರೆ. ನೀವು ಜಿಮ್, ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹಬ್ಬಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.





