ಬಿಜೈ ರಾಜ ಕೊಲೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ಖುಲಾಸೆ

Share with

ಮಂಗಳೂರು: ಬಿಜೈ ರಾಜ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2012ರಲ್ಲಿ ಫಳ್ನೀರ್ ವೆಸ್ಟ್ ಗೇಟ್ ಟವರ್ಸ್ ಕಟ್ಟಡದ ನ್ಯಾಷನಲ್ ಮೆಡಿಕಲ್ ಸಮೀಪದ ಕಾಯಿನ್ ಬೂತ್ ಬಳಿ ರವಿ ಪೂಜಾರಿ ಒಳಸಂಚು ನಡೆಸಿ ಶೈಲೇಶ್ ರಾಜ ಯಾನೆ ಬಿಜೈ ರಾಜನನ್ನು ಕೊಲೆ ಮಾಡಿಸಿದ್ದ ಎಂಬುದಾಗಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಮಂಗಳೂರಿನ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಘಟನೆಯ ವೇಳೆ ರವಿ ಪೂಜಾರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2021ರಲ್ಲಿ ಆತನನ್ನು ಸೆನೆಗಲ್‌ನಲ್ಲಿ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಬಿಜೈ ರಾಜ ಕೊಲೆ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಅವರು ರವಿ ಪೂಜಾರಿ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ರವಿ ಪೂಜಾರಿ ವಿರುದ್ಧ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವು ಪ್ರಕರಣಗಳು ತನಿಖೆಗೆ ಬಾಕಿ ಇವೆ. ಮಂಗಳೂರಿನ ವಕೀಲರಾದ ಬಿ.ಅರುಣ್ ಬಂಗೇರ ಮತ್ತು ರಿಹಾನಾ ಪರ್ವೀನ್ ಅವರು ಪೂಜಾರಿ ಪರ ವಾದಿಸಿದ್ದರು.


Share with

Leave a Reply

Your email address will not be published. Required fields are marked *