ಹೆಬ್ರಿ: ಬೈಕ್ ಗೆ ಕಾರು ಡಿಕ್ಕಿ; ಸವಾರ ಮೃತ್ಯು

Share with

ಉಡುಪಿ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದಲ್ಲಿ ಸಂಭವಿಸಿದೆ. ಪಳ್ಳಿ ಗ್ರಾಮದ ವಿಶ್ವನಾಥ ಮೃತ ದುರ್ದೈವಿ. ಇವರು ರವಿ ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿಯಿಂದ ಅಜೆಕಾರು ಕಡೆಗೆ ತೆರಳುತ್ತಿದ್ದರು.

ವರಂಗ ಗ್ರಾಮದ ಕೆಲಕಿಲ ಸೇತುವೆಯಿಂದ ಸ್ವಲ್ಪ ಮುಂದೆ ತಲುಪುವಾಗ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು, ಗಾಯಗೊಂಡಿದ್ದರು. ವಿಶ್ವನಾಥ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ವಿಶ್ವನಾಥ ಅವರು ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರೇಸಿಯಮ್ಮ ಎಂಬವರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *