

ಮಂಗಳೂರಿನಲ್ಲಿ ಬಿಸು ಎಂದು ಕರೆಯಲಾಗುವ ವಿಷು ಹಬ್ಬವು ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಆಚರಿಸಲಾಗುವ ಹೊಸ ವರ್ಷವಾಗಿದೆ. ವಿಷು ಹಬ್ಬ ಎಂದರೇನು..? ವಿಷು ಹಬ್ಬವನ್ನು ಆಚರಿಸುವುದು ಹೇಗೆ..?
ವಿಷು ಕೇರಳ ಮತ್ತು ಇನ್ನಿತರ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಆಚರಿಸಲಾಗುವ ಪ್ರಾದೇಶಿಕ ಹಿಂದೂ ಹಬ್ಬವಾಗಿದೆ. ಇದು ಜ್ಯೋತಿಷ್ಯಶಾಸ್ತ್ರದ ಹೊಸ ವರ್ಷದ ಆರಂಭ ಮತ್ತು ಕೇರಳದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ವಿಷುವನ್ನು ಕೇರಳದ ಜನರಿಗೆ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ ದಿನವನ್ನು ವಿಷು ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಕ್ರಿ.ಪೂ 844 ರಿಂದ ಆರಂಭವಾಯಿತು ಎನ್ನುವ ನಂಬಿಕೆಯಿದೆ. ಈ ಬಾರಿ ಸೂರ್ಯನು ಮೇಷ ರಾಶಿಯನ್ನು ಏಪ್ರಿಲ್ 14 ರ ಮಧ್ಯಾಹ್ನ ಪ್ರವೇಶಿಸುತ್ತಾನೆ, ಮರುದಿನ ಅಂದರೆ ಏಪ್ರಿಲ್ 15, ಶನಿವಾರ, ಕೇರಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ವಿಷು ಹಬ್ಬವನ್ನು ಆಚರಿಸಲಾಗುತ್ತದೆ.
ಇದು ಕೇರಳದ ಹೊಸ ವರ್ಷವನ್ನು ಗುರುತಿಸುವ ಹಬ್ಬವಾಗಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ಮಲಯಾಳಂನ ‘ಕಣಿ’ ಪದವು ‘ಮೊದಲು ಕಾಣುವವನು’ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ವಿಷುಕಣಿಯು ವಿಷುವಿನಲ್ಲಿ ಮೊದಲು ಮುಂಜಾನೆಯನ್ನು ನೋಡುವುದು ಎಂಬುದಾಗಿದೆ. ಈ ದಿನ ನಾವು ಮಂಗಳಕರ ಅಥವಾ ಶುಭ ವಿಷಯಗಳನ್ನು ನೋಡಿದರೆ ಅಥವಾ ಅನುಭವಿಸಿದರೆ ಅದು ವರ್ಷಪೂರ್ತಿ ನಮಗೆ ಅದಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ ವಿಷು ಹಬ್ಬದ ದಿನದಂದು ಮೊದಲು ವಿಷುಕಣಿಯನ್ನು ನೋಡುವ ವಾಡಿಕೆಯಿದೆ.
ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ, ಕನಕ ಇತ್ಯಾದಿಯನ್ನು ಅಣಿಗೊಳಿಸಿ ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ.




