ಉಡುಪಿ: ನನಗೆ ಗೆಲುವಿನ ವಿಶ್ವಾಸವಿದೆ. ಮತದಾರರು ನನಗೆ ಮತ ಹಾಕಲು ನಿಶ್ಚಯ ಮಾಡಿದ್ದಾರೆ. ಮತದಾರರ ಮನಸ್ಸಿಗೆ ದೇವರು ಬುದ್ಧಿ ಕೊಡಬೇಕು. ನಾವು ನಿನ್ನೆಯವರೆಗೆ ಶತ ಪ್ರಯತ್ನ ಮಾಡಿದ್ದೇವೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ರಘುಪತಿ ಭಟ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎಲ್ಲಾ ಮನೆಗಳಿಗೆ 2000 ಹಂಚಿದ್ದಾರೆ. ಉಡುಪಿ ಭಾಗದಲ್ಲಿ ಕೊಟ್ಟಿಲ್ಲ ಆದರೆ ಶಿವಮೊಗ್ಗ ಭಾಗದಲ್ಲಿ ಹಂಚಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಹಣ ಹಂಚಿದ್ದಾರೆ ಎಂದ ಅವರು, ಪದವೀಧರ ಕ್ಷೇತ್ರದಲ್ಲಿ ಮೊದಲ ಬಾರಿ ಹಣ ಹಂಚಿಕೆ ನಡೆದಿದೆ. ನೈರುತ್ಯ ಪದವೀಧರ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲು. ಇಷ್ಟರವರೆಗೆ ಕಾಂಗ್ರೆಸ್ ಹಣ ಹಂಚಿಲ್ಲ ಈ ಬಾರಿಯೂ ಹಂಚಿಲ್ಲ ಎಂದರು.
ಪದವೀಧರ ಕ್ಷೇತ್ರದಲ್ಲೂ ಹಣಕೊಟ್ಟು ಓಟು ಪಡೆಯುವ ಪರಿಸ್ಥಿತಿ ಬಂದಿದೆ. ಪರಿವಾರದ ಹಿರಿಯರು ಇದನ್ನು ಗಮನಿಸಬೇಕು. ವಿಧಾನ ಪರಿಷತ್ ಚುನಾವಣೆಗೆ ಕವರ್ ಹಂಚುವ ಸಂಸ್ಕೃತಿ ಇರಲಿಲ್ಲ.ಶಿವಮೊಗ್ಗ ಚುನಾವಣೆಯಲ್ಲಿ ಮಾಡಿದ್ದಾರೆ ಅದು ನನಗೆ ಗೊತ್ತು. ತುಂಬಾ ಜನ ಕರೆ ಮಾಡಿ ನನಗೆ ಹೇಳಿದ್ದಾರೆ. ಹಣ ಅವರಿಂದ ತೆಗೆದುಕೊಂಡಿದ್ದೇವೆ ಮತ ನಿಮಗೆ ಹಾಕುತ್ತೇವೆ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಳಿ ಹಣ ಇದೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಹಣ ಕೊಟ್ಟು ವೋಟು ಪಡೆದುಕೊಳ್ಳಬಹುದು ಅನ್ನೋದು ಸುಳ್ಳು. ಅದು ಈ ಚುನಾವಣೆಯಲ್ಲಿ ಸಾಬೀತಾಗುತ್ತೆ ಎಂದರು.
ಮಾಧ್ಯಮದ ಹೆಸರಿನಲ್ಲಿ ಫೇಕ್ ವಿಡಿಯೋ ಹೊರಬಿಟ್ಟಿದ್ದಾರೆ. ರಘುಪತಿ ಭಟ್ ಕಣದಿಂದ ಹಿಂದಕ್ಕೆ ಸರಿದಿರುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.ಬಿಜೆಪಿಯಲ್ಲಿ ಇರುವವರೆಲ್ಲ ನಮ್ಮವರೇ.ಪಕ್ಷಕ್ಕಾಗಿ ಅಲ್ಲಿ ಇರ್ತಾರೆ , ಆದರೆ ನನ್ನನ್ನು ಬೆಂಬಲಿಸುತ್ತಾರೆ. ಬಿಜೆಪಿಯಲ್ಲಿದ್ದೇ ನನಗೆ ಸಹಾಯ ಮಾಡುವವರು ಅನೇಕ ಮಂದಿ ಇದ್ದಾರೆ ಎಂದು ಹೇಳಿದರು.
ನಾಳೆಯಿಂದ ನಾನು ಮತ್ತೆ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ನಾಳೆ ನಾನು ಕೂಡ ವಿಜಯೋತ್ಸವ ಆಚರಿಸುತ್ತೇನೆ. ಯಾವತ್ತು ನಾನು ಕೌಂಟಿಂಗ್ ಏಜೆಂಟಾಗಿ ಇರುತ್ತಿದ್ದೆ. ಈ ಬಾರಿ ನನ್ನ ಏಜೆಂಟ್ ಮಾಡಿಲ್ಲ ಅಷ್ಟೇ. ಮೋದಿ ಅತಿ ಹೆಚ್ಚು ಬಹುಮತದಲ್ಲಿ ಗೆಲ್ಲಬೇಕು ಅನ್ನೋದು ನನ್ನ ಆಸೆ. ಉಡುಪಿಯಲ್ಲಿ ಕೋಟ ಮಂಗಳೂರಿನಲ್ಲಿ ಚೌಟ ಗೆಲ್ಲಬೇಕು. ಬಿಜೆಪಿ ಎಲ್ಲಾ 28 ಸ್ಥಾನ ಗೆಲ್ಲಬೇಕು ಎಂದು ನಾನು ಹಾರೈಸುವವನು ಎಂದರು.