ಬಿಜೆಪಿ ಮೀಸಲಾತಿ ವ್ಯವಸ್ಥೆಯನ್ನು ಬುಡ ಮೇಲುಗೊಳಿಸಿದೆ

Share with

ಉಡುಪಿ: ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿರೋಧಿಯಾಗಿರುವ ಬಿಜೆಪಿ, ಈ ದೇಶದ ಮೀಸಲಾತಿ ವ್ಯವಸ್ಥೆಯನ್ನು ಬುಡ ಮೇಲುಗೊಳಿಸಿದೆ ಎಂದು ಸಮಾನ ಮನಸ್ಥ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕ ಮಂಜುನಾಥ್ ಗಿಳಿಯಾರು ಆರೋಪಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿ, ಗುಪ್ತ ಕಾರ್ಯಸೂಚಿಯನ್ನು ಹೊಂದಿರುವ ಬಿಜೆಪಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ. ಈ ಚುನಾವಣೆ ದಲಿತರು, ಶೋಷಿತ ಸಮುದಾಯ, ಬಡವರ ಹಾಗೂ ಮಹಿಳೆಯರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾ ಒಕ್ಕೂಟದ ವತಿಯಿಂದ ಮನೆ ಮನಗಳಲ್ಲಿ ಅಂಬೇಡ್ಕರ್ ಅಭಿಯಾನವನ್ನು ಎ.21ರಿಂದ ಆರಂಭಿಸಲಾಗಿದೆ. ಅದರಂತೆ ದಲಿತರ ಕಾಲನಿಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದರೆ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯ ಒದಗುವುದು ಶತಸಿದ್ಧ. ಆದ್ದರಿಂದ ಪ್ರಜ್ಞಾವಂತ ಮತದಾರರು ಈ ಬಾರಿ ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾ ಒಕ್ಕೂಟದ ಪ್ರಮುಖರಾದ ವಾಸುದೇವ ಮುದೂರು, ಅಣ್ಣಪ್ಪ ನಕ್ರೆ ಕಾರ್ಕಳ, ವಿಶ್ವನಾಥ ಬೆಳ್ಳಂಪಳ್ಳಿ, ಶ್ಯಾಂ ಸುಂದರ್ ತೆಕ್ಕಟ್ಟೆ, ರಾಜು ಬೆಟ್ಟಿನಮನೆ, ಕುಮಾರ್ ಕೋಟ, ಸುರೇಶ್ ಹಕ್ಲಾಡಿ, ಶಿವಾನಂದ ಮೂಡಬೆಟ್ಟು, ಮೋಹನ್, ಚಂದ್ರಶೇಖರ್ ಉಡುಪಿ, ಕೀರ್ತಿ ಕುಮಾರ್, ಸಾವಿತ್ರಿ ಕಾರ್ಕಳ, ಸುಮಿತ್ರಾ ಕಾರ್ಕಳ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *