ಉಡುಪಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಡಿಯಾಳಿಯ ಜಿಲ್ಲಾ ಕಚೇರಿಯ ಬಳಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಖಾಲಿ ಚೆಂಬು ಹಿಡಿದು, ರಸ್ತೆ ತಡೆ ನಡೆಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, 2023ರ ಚುನಾವಣೆಯಲ್ಲಿ ಬಿಟ್ಟಿ ಆಮಿಷ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಾಮಾನ್ಯ ಜನರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಚೊಂಬು ಕೊಟ್ಟು ಜನರು ಭಿಕ್ಷೆ ಬೇಡುವಂತೆ ಮಾಡಿದೆ. ಇಂಧನ ದರ ಇಳಿಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇಂಧನ ಹೆಚ್ಚಳವಾದರೆ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಜನಪ್ರತಿನಿಧಿಗಳಿಗೆ ಸರಕಾರದ ಯಾವುದೇ ಫಂಡ್ ಬಾರದೆ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದೆ. ಜನರಿಗೆ ಅನ್ಯಾಯ ಮಾಡುತ್ತಾ ಸರಕಾರ ಕಾಲಹರಣ ಮಾಡುತ್ತಿದೆ. ಸರಕಾರ ನಡೆಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿದೆ ಎಂದು ದೂರಿದರು.