ಬೆಳಗಾವಿ: ಸರಕಾರಿ ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಬಳಸಿ ಖಾಸಗಿ ವಿಡಿಯೋಗಳನ್ನು ರಿಕಾರ್ಡ್ ಮಾಡಿ ಅಧಿಕಾರಿಗೆ 50 ಲಕ್ಷ ಬೇಡಿಕೆಯಿಟ್ಟ ಮೂವರು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆ.

ಬೆಳಗಾವಿ ನಗರದ ಮಾಳಮಾರುತಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಗೋಕಾಕ ಮೂಲದ ಸಮೀರ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51), ಮೊಹಮ್ಮದ್ ಬಾಳೇಕುಂದ್ರಿ ಎಂಬ ಮೂವರು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆ.
ಮಹಿಳಾ ಅಧಿಕಾರಿ ಮನೆಯ ಕೊಠಡಿಯ ಲೈಟ್ ಹೋಲ್ಡರ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಅಧಿಕಾರಿಯ ಖಾಸಗಿ ವಿಡಿಯೋಗಳನ್ನು ರಿಕಾರ್ಡಿಂಗ್ ಮಾಡಿದ್ದಾರೆ. ಈ ವಿಡಿಯೋ ಮುಂದಿಟ್ಟುಕೊಂಡು ಮಹಿಳಾ ಅಧಿಕಾರಿಗೆ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ. ನೊಂದ ಮಹಿಳಾ ಅಧಿಕಾರಿಯು ಈ ಸಂಬಂಧ ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರು ಆದರಿಸಿ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ ಬ್ಲ್ಯಾಕ್ ಮೇಲ್ ಮಾಡಿದ್ದ ಗೋಕಾಕ ಮೂಲದ ನಕಲಿ ಪತ್ರಕರ್ತರನ್ನ ಬಂಧಿಸಿದ್ದಾರೆ.ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




