ಮಂಗಳೂರು: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆ

Share with

ಮಂಗಳೂರು: ಫೆ.27ರಂದು ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಹಳೆಯಂಗಡಿಯ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದ್ದಾರೆ.

ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಹಳೆಯಂಗಡಿಯ ರೈಲ್ವೇ ಸೇತುವೆಯ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ (15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್(15) ಸಾವನ್ನಪ್ಪಿದ್ದಾರೆ.

ಮೃತರೆಲ್ಲರೂ ಮಂಗಳೂರಿನ ಸುರತ್ಕಲ್​ನ ವಿದ್ಯಾದಾಯಿನಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದರು. ನಿನ್ನೆ ನಡೆದ ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಮನೆಗೆ ಬಾರದ ವಿದ್ಯಾರ್ಥಿಗಳು ಕಾಣೆಯಾಗಿದ್ದರು. ಈ ಕುರಿತು ಮಕ್ಕಳ ಪೋಷಕರು ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಕಾರ್ಯಾಚರಣೆಗೆ ಇಳಿದ ಸುರತ್ಕಲ್ ಪೊಲೀಸರು ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿದ್ದಾರೆ. ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿದರು.

ಹಳೆಯಂಗಡಿ ನದಿ ಬಳಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್, ಸಮವಸ್ತ್ರ ಪತ್ತೆಯಾಗಿತ್ತು. ಅಲ್ಲಿ ತೀವ್ರ ಹುಡುಕಾಟ ನಡೆಸಿದಾಗ ನಾಲ್ವರು ಮಕ್ಕಳ ಶವ ಪತ್ತೆಯಾಗಿವೆ. ನದಿಯಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *