ನಾಪತ್ತೆಯಾಗಿದ್ದ ಕೊಣಾಜೆ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಪತ್ತೆ

Share with

ಉಳ್ಳಾಲ: ಕೆಲಸಕ್ಕೆ ತೆರಳಿ ವಾಪಸ್ಸಾಗದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಮಾ. 11ರ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಕೊಣಾಜೆ ಗ್ರಾಮ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ನಾಪತ್ತೆಯಾಗಿದ್ದವರು.

ಅವರು ಮಂಗಳೂರಿನ ಕದ್ರಿ ಬಳಿ ಇರುವ ಮೊರ್ಟಾಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದ ಅವರು ಮಾ. 9ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ವಿವೇಕ್ ರಾತ್ರಿ ಸುಮಾರು 9.30ಕ್ಕೆ ತಾಯಿಗೆ ದೂರವಾಣಿ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಮನೆಗೆ ಬರಲು ತಡವಾಗಬಹುದು, ನನಗಾಗಿ ಕಾಯಬೇಡಿ ಎಂದು ಹೇಳಿದ್ದರು.

ಆದರೆ ರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಮರುದಿನ ಮಾರ್ಚ್ 10ರಂದು ಕೂಡ ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕವಾಗಿರಲಿಲ್ಲ. ಬಳಿಕ ವಿವೇಕ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ಕರೆ ಮಾಡಿ ವಿಚಾರಿಸಿದಾಗ ಕಂಪೆನಿ ಬಂದ್‌ ಆಗಿರುವುದಾಗಿ ತಿಳಿದು ಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಬುಧವಾರ ಸೋಮೇಶ್ವರ ಕೆರೆಯಲ್ಲಿ ವಿವೇಕ್ ಶೆಟ್ಟಿಗಾರ್ ಅವರ ಮೃತದೇಹ ಪತ್ತೆಯಾಗಿದ್ದು, ವಿವೇಕ್ ತಮ್ಮ ಸ್ಕೂಟರನ್ನು ಸೋಮೇಶ್ವರ ರಥದ ಕೊಠಡಿ ಸಮೀಪ ನಿಲ್ಲಿಸಿದ್ದು ಕಂಡುಬಂದಿದೆ. ಅಲ್ಲಿಯೇ ಅವರ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ಇಟ್ಟು ಅವರು ಕಾಣೆಯಾಗಿರುವುದು ತಿಳಿದುಬಂದಿದೆ.

ವಿವೇಕ್ ಶೆಟ್ಟಿಗಾ‌ರ್ ಅವರು ಸುಮಾರು 8 ತಿಂಗಳ ಹಿಂದೆ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದರು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *