ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶಗಳು ಬಂದಿದ್ದು, ಪೊಲೀಸರು ಪರಿಶೀಲಿಸಿದಾಗ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.

ಬೆಂಗಳೂರಿನ ಕೋರಮಂಗಲ, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವು ಆರ್ಟಿಒ ಕಚೇರಿಗಳಿಗೆ ಗಾಯತ್ರಿ ಶಾಬಾಜ್: ಹಾಟ್ ಮೇಲ್ ಡಾಟ್ ಕಾಮ್ ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಹಾಗೂ 10 ಬಾಂಬ್ ಸ್ಫೋಟಗೊಳ್ಳುತ್ತವೆ ಎಂದು ದುಷ್ಕರ್ಮಿಗಳು ಇ-ಮೇಲ್ ಸಂದೇಶದಲ್ಲಿ ಉಲ್ಲೇಖೀಸಿದ್ದರು. ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಅವರು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್‌ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ರೀತಿಯಾಗಿ ಸಂದೇಶ ಕಳಿಸುವವರ ವಿರುದ್ಧ ಪೊಲೀಸರು ನಿಗಾ ಇಟ್ಟಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕಳಿಸಿದ್ದು ಯಾರು ಎಂಬ ಬಗ್ಗೆ ತಾಂತ್ರಿಕ ಕಾರ್ಯಾಚರಣೆ ನಡೆಸಲಾಗುತ್ತಿದೆ.




