ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಬೇಕೂರು ಶಾಲಾ ಪರಿಸರದ ಬಸ್ ನಿಲ್ದಾಣ ಸಮೀಪದಲ್ಲಿ ಬೃಹತ್ ಮರವೊಂದರ ರೆಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ. ಬಸ್ ಸಹಿತ ಘನಗಾತ್ರದ ವಾಹನಗಳಿಗೆ ಈ ರೆಂಬೆಗಳು ಬಡಿಯುತ್ತಿರುವುದಾಗಿ ದೂರಲಾಗಿದೆ.


ಅಲ್ಲದೆ ದಿನನಿತ್ಯ ನೂರಾರು ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ಜನರು ನಡೆದು ಹೋಗುತ್ತಿದ್ದು, ಅಲ್ಲದೆ ಈ ಪರಿಸರದಿಂದ ವಿದ್ಯುತ್ ತಂತಿ ಹಾದುಹೋಗಿದೆ. ಮರ ಮುರಿದು ಬಿದ್ದಲ್ಲಿ ದುರಂತ ತಪ್ಪಿದ್ದಲ್ಲವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕೈಕಂಬ-ಬಾಯಾರು ರಸ್ತೆ ಉದ್ದಕ್ಕೂ ಅಲ್ಲಲ್ಲಿ ಅಪಾಯಕ್ಕೆ ಕಾರಣವಾಗಿದ್ದ ಮರ ಸಹಿತ ರೆಂಬೆಗಳನ್ನು ಈ ಹಿಂದೆ ರಸ್ತೆ ನಿರ್ಮಾಣದ ವೇಳೆ ತೆರವುಗೊಳಿಸಲಾಗಿದೆ. ಈ ಮರದ ರೆಂಬೆಯನ್ನು ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.




