Puttur: ಲಂಚ ಪ್ರಕರಣ; ತಲೆಮರೆಸಿಕೊಂಡಿರುವ ತಹಶೀಲ್ದಾರ್ ಜಾಮೀನು ರದ್ದು

Share with

ಮಂಗಳೂರು: ಜಮೀನಿನ ನಿರಾಕ್ಷೇಪಣ ಪತ್ರಕ್ಕೆ ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಕೂಡಲಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆ.25ರಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್.ಜಿ. ಅವರು ವಿಚಾರಣೆ ನಡೆಸಿ ಜಾಮೀನು ನಿರಾಕರಿಸಿರುತ್ತಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಜಮೀನಿನ ನಿರಾಕ್ಷೇಪಣ ಪತ್ರಕ್ಕೆ ಲಂಚನ ಬೇಡಿಕೆ ಇಟ್ಟ ಸಂಬಂಧ ಫಲಾನುಭವಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ.28ರಂದು ಪುತ್ತೂರು ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಚೇರಿಯ ಭೂ ಸುಧಾರಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ಸುನೀಲ್ ಕುಮಾರ್ ದೂರುದಾರರಿಂದ 12 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ತಹಶೀಲ್ದಾ‌ರ್ ಅವರಿಗೆ 10 ಸಾವಿರ ರೂ. ನೀಡಬೇಕು ಎಂದು ಆತ ತಿಳಿಸಿದ್ದು, ಇಬ್ಬರ ವಿರುದ್ಧವೂ ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರಡಿ ಪ್ರಕರಣ ದಾಖಲಾಗಿತ್ತು. ಸುನೀಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಕೂಡಲಗಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ ಅವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *