ಗಾಜಿಪುರ: ಭಾರತೀಯ ಮದುವೆ ಎಂದರೆ ಅಲ್ಲಿ ಅದ್ದೂರಿತನ, ಲಕ್ಷಾಂತರ ರೂಪಾಯಿ ಖರ್ಚು, ಬಗೆಬಗೆಯ ಖಾದ್ಯಗಳು ಹಾಗೂ ಗಣ್ಯಾತಿಗಣ್ಯರ ಉಪಸ್ಥಿತಿ ಇರುವುದು ಸಾಮಾನ್ಯ. ಜನರು ತಮ್ಮ ಮನೆಯ ಮದುವೆಯನ್ನು ಸ್ಮರಣೀಯವಾಗಿಸಲು ವರ್ಷಗಟ್ಟಲೆ ಹಣ ಉಳಿಸಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಆದರೆ ಉತ್ತರ ಪ್ರದೇಶದ ಗಾಜಿಪುರದ ಸಿದ್ದಾರ್ಥ್ ರೈ ಎಂಬ ಯುವಕ ಮಾತ್ರ ತನ್ನ ತಂಗಿಯ ಮದುವೆಯನ್ನು ಸಮಾಜಕ್ಕೆ ಮಾದರಿಯಾಗುವಂತೆ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತನ್ನ ತಂಗಿಯ ವಿವಾಹ ಮಹೋತ್ಸವಕ್ಕೆ ಸಿದ್ದಾರ್ಥ್ ಕೇವಲ ನೆಂಟರಿಷ್ಟರನ್ನು ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಇದ್ದ ನೂರಾರು ಭಿಕ್ಷುಕರು ಹಾಗೂ ತಂಗಲು ಮನೆ ಇಲ್ಲದೆ ರಸ್ತೆ ಬದಿ ಇರುವವರನ್ನು ‘ಮುಖ್ಯ ಅತಿಥಿಗಳಾಗಿ’ ಆಮಂತ್ರಿಸಿದ್ದಾರೆ. ಕೇವಲ ಆಮಂತ್ರಣ ನೀಡುವುದಷ್ಟೇ ಅಲ್ಲದೆ, ಅವರನ್ನು ವಿಶೇಷ ವಾಹನಗಳ ಮೂಲಕ ಗೌರವಪೂರ್ವಕವಾಗಿ ಮದುವೆ ಮಂಟಪಕ್ಕೆ ಕರೆತಂದಿದ್ದಾರೆ. ಮನೆಯವರೇ ನಿಂತು ಅವರನ್ನು ಸ್ವಾಗತಿಸಿ, ಕುಟುಂಬದ ಸದಸ್ಯರಂತೆಯೇ ಮದುವೆಯ ಪಂಕ್ತಿಯಲ್ಲಿ ಕೂರಿಸಿ ಊಟ ಬಡಿಸಿದ್ದಾರೆ.
ಮದುವೆಯ ಸಂಭ್ರಮದಲ್ಲಿ ಉಳಿದ ಅತಿಥಿಗಳಂತೆ ಈ ವಿಶೇಷ ಅತಿಥಿಗಳು ಕೂಡ ಮುಕ್ತವಾಗಿ ಪಾಲ್ಗೊಂಡು, ಸಂಗೀತ ಮತ್ತು ನೃತ್ಯದ ಸವಿಯನ್ನು ಸವಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಭಿಕ್ಷಕರು, “ನಮ್ಮ ಬದುಕಿನಲ್ಲಿ ಇಷ್ಟು ಗೌರವ ಮತ್ತು ಪ್ರೀತಿಯನ್ನು ಎಂದೂ ಕಂಡಿರಲಿಲ್ಲ. ಮದುವೆಯ ಸಂಭ್ರಮದಲ್ಲಿ ನಮ್ಮನ್ನು ಸಮಾನವಾಗಿ ಕಂಡಿದ್ದು ನಮಗೆ ಭಾವುಕ ಕ್ಷಣವಾಗಿತ್ತು” ಎಂದು ಸಂತಸ ಹಂಚಿಕೊಂಡಿದ್ದಾರೆ. ಇವರಿಗೆ ಯಾರೂ ಕೂಡ ಹೊರಗಿನವರು ಎಂಬ ಭಾವನೆ ಬರದಂತೆ ಸಿದ್ದಾರ್ಥ್ ರೈ ಮುನ್ನೆಚ್ಚರಿಕೆ ವಹಿಸಿದ್ದರು.
ಈ ಅಪರೂಪದ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ನಿಜವಾದ ಆಶೀರ್ವಾದ ಸಿಗುವುದು ಇಂತಹವರಿಂದಲೇ” ಎಂದು ಸಿದ್ದಾರ್ಥ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ಕಾರ್ಯವನ್ನು ಮೆಚ್ಚಿದ್ದು ಭಾರಿ ವೈರಲ್ ಆಗುತ್ತಿದೆ. ಮದುವೆ ಮುಗಿದ ನಂತರವೂ ಎಲ್ಲ ಅತಿಥಿಗಳನ್ನು ಅತ್ಯಂತ ಗೌರವದಿಂದ ಸಿದ್ದಾರ್ಥ್ ಬೀಳ್ಕೊಟ್ಟಿದ್ದು, ಇಂದಿನ ಅಬ್ಬರದ ಮದುವೆಗಳ ನಡುವೆ ಈ ಮದುವಯು ಎಲ್ಲರ ಗಮನ ಸೆಳೆದಿದೆ.




