ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

Share with

ನವದೆಹಲಿ, ನವೆಂಬರ್ 4: ಹತ್ತು ವರ್ಷದ ಹಿಂದೆ ಟೆಲಿಕಾಂ ವಲಯಕ್ಕೆ ಜಿಯೋ ಎನ್ನುವ ಬಿರುಗಾಳಿ ಎದ್ದು ಡಿಜಿಟಲ್ ಕ್ರಾಂತಿಯೇ ಸೃಷ್ಟಿಯಾಗಲು ಎಡೆಯಾಗಿತ್ತು. ಈಗ ಅದೇ ರೀತಿಯಲ್ಲಿ ಮಿಂಚಿನ ಸಂಚಾರ ನಡೆಸುವ ಸರದಿ ಬಿಎಸ್ಸೆನ್ನೆಲ್ನದ್ದು. ದುಬಾರಿ ಡಾಟಾ ಬಿಸಿ ಎದುರಿಸುತ್ತಿರುವ ಮೊಬೈಲ್ ಗ್ರಾಹಕರಿಗೆ ಅಗ್ಗದ ದರಗಳ ಬಿಎಸ್ಸೆನ್ನೆಲ್ ಪರ್ಯಾಯ ಆಯ್ಕೆ ಆಗಿದೆ. ಲಕ್ಷಾಂತರ ಗ್ರಾಹಕರು ಜಿಯೋ, ಏರ್ಟೆಲ್ ತೊರೆದು ಬಿಎಸ್ಸೆನ್ನೆಲ್ ಅಪ್ಪುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಹಳ ಕ್ಷಿಪ್ರ ವೇಗದಲ್ಲಿ 4ಜಿ ನೆಟ್ವರ್ಕ್ ಅಳವಡಿಸುತ್ತಿದೆ.

ಒಂದು ಲಕ್ಷಕ್ಕೂ ಹೆಚ್ಚು 4ಜಿ ಟವರ್ಗಳನ್ನು ಸ್ಥಾಪಿಸುವ ಗುರಿ ಇಟ್ಟಿರುವ ಬಿಎಸ್ಸೆನ್ನೆಲ್, ಈಗಾಗಲೇ 50,000 ಟವರ್ ಸ್ಥಾಪಿಸಿದೆ. ಇದರಲ್ಲಿ 41,000 ಟವರ್ಗಳು ಕಾರ್ಯಾಚರಣೆ ಹಂತ ಪ್ರವೇಶಿಸಿವೆ. ಇದೇ ವೇಳೆ, ಬಿಎಸ್ಸೆನ್ನೆಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವ ಟೆಲಿಕಾಂ ಆಪರೇಟರ್ಗಳ ಉಪಸ್ಥಿತಿಯೇ ಇಲ್ಲದ ರಿಮೋಟ್ ಸ್ಥಳಗಳನ್ನು ಪ್ರವೇಸಿಸುತ್ತಿದೆ. ಇಂಥ ಪ್ರದೇಶಗಳಲ್ಲಿ 5,000 ಟವರ್ಗಳನ್ನು ಭಾರತೀಯ ದೂರ ಸಂಚಾರ ನಿಗಮವು ಸ್ಥಾಪಿಸಿದೆ.

ಭಾರತದಲ್ಲಿ ಶೇ. 95ರಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಕವರೇಜ್ ಇದೆ. ಇನ್ನುಳಿದ ಶೇ. 5ರಷ್ಟು ಪ್ರದೇಶವನ್ನು ಬಿಎಸ್ಸೆನ್ನೆಲ್ ಟಾರ್ಗೆಟ್ ಮಾಡಿದೆ. ಇದರ ಜೊತೆಗೆ ಅದು ತನ್ನ ಅಗ್ಗದ ರೀಚಾರ್ಜ್ ದರಗಳನ್ನು ಕಡಿಮೆ ಮಾಡುವ ಯಾವ ಯೋಜನೆಯೂ ಹಾಕಿಕೊಂಡಿಲ್ಲ. ಇದು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ತಲೆ ನೋವು ತರುವ ಸಂಗತಿ.

ಕಳೆದ ಎರಡು ತಿಂಗಳಲ್ಲಿ ಬಿಎಸ್ಸೆನ್ನೆಲ್ ಸುಮಾರು 55 ಲಕ್ಷ ಹೊಸ ಬಳಕೆದಾರರನ್ನು ಪಡೆದಿದೆ. ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಎನಿಸಿದ ರಿಲಾಯನ್ಸ್ ಜಿಯೋ ಇದೇ ವೇಳೆ 40 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್ಸೆನ್ನೆಲ್ಗೆ ಸಿಗುತ್ತಿರುವ ಹೊಸ ಗ್ರಾಹಕರಲ್ಲಿ ಹೆಚ್ಚಿನವರು ಜಿಯೋ ಮತ್ತು ಏರ್ಟೆಲ್ನಿಂದ ವಲಸೆ ಹೋದವರೇ ಆಗಿದ್ದಾರೆ.


Share with

Leave a Reply

Your email address will not be published. Required fields are marked *